ಮಂಗಳೂರು, ಜ ೦2(SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ 4 ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೊಕ್ಕಡ ಹಾಗೂ ಕೊಯಿಲದಲ್ಲಿ ಈಗಾಗಲೇ ಪಾಲನಾ ಕೇಂದ್ರ ಕಾರ್ಯಾಚರಿಸುತ್ತಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಪುತ್ತೂರು ತಾಲೂಕಿನ ಪಾಣಾಜೆ, ಸುಳ್ಯ ತಾಲೂಕಿನ ಬೆಳ್ಳಾರೆ, ಬೆಳ್ತಂಗಡಿ ತಾಲೂಕಿನ ಕಣಿಯೂರು ಹಾಗೂ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಪಾಲನಾ ಕೇಂದ್ರ ತೆರೆಯಲಾಗುವುದು. ಇಲ್ಲಿ ಎಂಡೋ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಕಡೆ ನೀಡಲಾಗುವುದು ಎಂದು ಅವರು ಹೇಳಿದರು.
ಶೇಕಡಾ 25ಕ್ಕಿಂತ ಕಡಿಮೆ ಎಂಡೋಸಲ್ಫಾನ್ ಪೀಡಿತರಲ್ಲಿ 556 ಮಂದಿ ಇದ್ದು, ಈ ಪೈಕಿ 52 ಮಂದಿ ಕ್ಯಾನ್ಸರ್ ನಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಇವರಿಗೆ ಮಾಸಿಕ ಮಿತವೇತನ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಎಂಡೋ ಸಂತ್ರಸ್ತರಿಗೆ ಪೌಷ್ಠಿಕ ಆಹಾರ ಒದಗಿಸಲು ವಿಶೇಷ ಪ್ಯಾಕೇಜ್ ಅಡಿ ಮಂಜೂರಾತಿ ನೀಡಲು ಅಗತ್ಯ ಪ್ರಸ್ತಾವನೆ ಸಲ್ಲಿಸಲು ಅವರು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಖಾಸಗೀ ವೈದ್ಯಕೀಯ ಕಾಲೇಜುಗಳ ಮೂಲಕ ಎಂಡೋ ಪೀಡಿತ ಪ್ರದೇಶಗಳಲ್ಲಿ ನೀಡುವ ವಿಶೇಷ ತಜ್ಞ ವೈದ್ಯರ ಶಿಬಿರದಲ್ಲಿ ರೋಗಿಗಳಿಗೆ ಔಷಧಿಗಳನ್ನು ತಪಾಸಣೆ ನಡೆಸಿದ ವೈದ್ಯರು ಸ್ಥಳದಲ್ಲಿಯೇ ನೀಡಬೇಕು. ಇದಕ್ಕೆ ಸಂಬಂಧಪಟ್ಟ ವೆಚ್ಚವನ್ನು ಆರೋಗ್ಯ ಇಲಾಖೆಯು ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳಿಗೆ ಮರುಪಾವತಿಸಲು ಕ್ರಮ ತೆಗೆದುಕೊಳ್ಳುವಂತೆ ಸಸಿಕಾಂತ್ ಸೆಂಥಿಲ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಉಜಿರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎಂಡೋ ಪೀಡಿತರ ಕೌಶಲ್ಯ ಕೇಂದ್ರವನ್ನು ಶೀಘ್ರವೇ ಕಾರ್ಯಾರಂಭ ಮಾಡುವಂತೆ ಸೂಚಿಸಿದರು.