ಉಡುಪಿ, ಜ 02(SM): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 'ಸುವರ್ಣ ತ್ರಿಭುಜ’ ಬೋಟ್ ಹಾಗೂ 7 ಮೀನುಗಾರರು ಕಣ್ಮರೆಯಾಗಿ 19 ದಿನಗಳು ಕಳೆದರೂ ಬೋಟ್ ಮತ್ತು ಮೀನುಗಾರರನ್ನು ಪತ್ತೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯತೆಯನ್ನು ಖಂಡಿಸಿ ಹಾಗೂ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಒತ್ತಾಯಿಸಿ ಜ. 6ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ತಡೆದು ಪ್ರತಿಭಟನೆ ಮಾಡಲು ಮೀನುಗಾರರು ನಿರ್ಧರಿಸಿದ್ದಾರೆ.
ಮಲ್ಪೆ ಮೀನುಗಾರರ ಸಂಘ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ಮೀನುಗಾರರ ಸಂಘಟನೆಗಳ ನೇತೃತ್ವದಲ್ಲಿ ಮಲ್ಪೆ ಬಂದರಿನಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಸರಕಾರ ಮೀನುಗಾರರ ಬದುಕಿನ ಜೊತೆಗೆ ಚೆಲ್ಲಾಟ ಆಡುತ್ತಿದೆ. ಡಿ. 13ರಂದು ಬೋಟ್ ನಾಪತ್ತೆಯಾಗಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕಾ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ. 6ರಂದು ನಡೆಯುವ ಪ್ರತಿಭಟನೆಯಲ್ಲಿ ಮೂರು ಜಿಲ್ಲೆಗಳ ಮೀನುಗಾರರು ಭಾಗವಹಿಸಿ, ಮೀನುಗಾರರ ಶಕ್ತಿ ಏನೆಂಬುವುದನ್ನು ತೋರಿಸಬೇಕು. ಆ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕು. ಅಲ್ಲದೆ, ಇನ್ಮುಂದೆ ಸರಕಾರ ಮೀನುಗಾರರ ಸುರಕ್ಷತೆಗೆ ಹೆಚ್ಚಿನ ಕ್ರಮಕೈಗೊಳ್ಳುವಂತೆ ಮಾಡಬೇಕಾಗಿದೆ ಎಂದರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ 19 ದಿನಗಳು ಕಳೆದರೂ ಸರಕಾರ ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಾಗಿ ಮೀನುಗಾರರು ತಮ್ಮ ಬಲ ಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ. ಆ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಕರೆನೀಡಿದರು.