ಹಾಸನ, ಜ 03(SM): ಇತ್ತೀಚಿಗಷ್ಟೇ ರಾಜ್ಯದ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆಯಾಗಿದೆ. ಸಂಪುಟ ವಿಸ್ತರಣೆಯಿಂದ ಎದ್ದಿರುವ ಅಸಮಾಧಾನಗಳೆಲ್ಲಾ ಜನವರಿ 13ರ ಒಳಗೆ ಸರಿಹೋಗುತ್ತವೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕಗಳಿಲ್ಲ. ನಾನೇ ಜ್ಯೋತಿಷ್ಯ ಹೇಳ್ತೀನಿ ಎಂದು ರೇವಣ್ಣ ಹೇಳಿದ್ದಾರೆ. ಪ್ರತಿಪಕ್ಷ ಬಿಜೆಪಿ ಸಮ್ಮಿಶ್ರ ಸರಕಾರದ ಆಡಳಿತವನ್ನು ಸಹಿಸಲಾಗದೆ ಇಲ್ಲ ಸಲ್ಲದ ಆರೋಪಗಳನ್ನು ನಡೆಸುತ್ತಿದೆ. ಬಿಜೆಪಿಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮೂಲಕ ಪಾಠ ಕಲಿಸಲಿದ್ದೇವೆ ಎಂದಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು, ಯಾವುದೇ ಸಣ್ಣ ವಿಷಯಕ್ಕೆ ಅವರಿಗೆ ಬೇಸರವಾಗಿದೆ. ಎಲ್ಲ ಸಚಿವರು ಅವರ ಕಾರ್ಯಗಳನ್ನು ನಿರ್ವಹಿಸುತ್ತಾರೆ ನಮ್ಮ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.