ಉಡುಪಿ,ಜ 03(MSP): ಉಡುಪಿ ನಗರದಾದ್ಯಂತ ಅಕ್ರಮ ಕಟ್ಟಡದ ನಿರ್ಮಾಣದ್ದೇ ಕಾರುಬಾರು. ಅಕ್ರಮ ಕಟ್ಟಡಗಳನ್ನು ಕಟ್ಟಲು ಮತ್ತೊಂದಿಷ್ಟು ಅಕ್ರಮ..! ಇದರ ಜ್ವಲಂತ ಉದಾಹರಣೆ ಇಲ್ಲಿದೆ ನೋಡಿ..ವಿದ್ಯುತ್ ತಂತಿಗೆ ತಗುಲುವಂತೆ ಹಳೆ ಗೀತಾಂಜಲಿ ಚಿತ್ರಮಂದಿರದ ಬಳಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ನಿರ್ಮಾಣ ಕಾಮಗಾರಿ ಸಂದರ್ಭ ಟ್ರಾನ್ಸ್ಫಾರ್ಮರ್ ನಿಂದ ಬಂದಿರುವ ವಿದ್ಯುತ್ ತಂತಿಗೆ ಕಟ್ಟಡ ಕಾಮಗಾರಿಗಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಿ ಮೂರು ತಂತಿಗಳನ್ನು ಒಟ್ಟಿಗೆ ಕಟ್ಟಲಾಗಿತ್ತು. ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡರು ಕಟ್ಟಿದ 3 ತಂತಿಗಳನ್ನು ಮಾತ್ರ ಸಂಬಂಧಟ್ಟವರು ತೆರವುಗೊಳಿಸಿರಲಿಲ್ಲ.
ಆದರೆ ಜ.2 ರ ಮದ್ಯಾಹ್ನ ಬಿಸಿಲಿನ ಪ್ರಖರಕ್ಕೆ ಪ್ಲಾಸ್ಟಿಕ್ ಕರಗತೊಡಗಿದೆ. ಪರಿಣಾಮ ಹೈಟೆನ್ಶನ್ ವಯರ್ ಒಂದಕ್ಕೊಂದು ತಾಗಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಪ್ಲಾಸ್ಟಿಕ್ ಹೊದಿಕೆ ಸುಟ್ಟು ರಸ್ತೆಗೆ ಬೀಳುತಿತ್ತು. ಇಲ್ಲಿ ಸಂಚರಿಸಿದ ವಾಹನ ಸವಾರರು ,ಪಾದಚಾರಿಗಳ ಮೇಲೆ ಸುಡುವ ಕರಗಿದ ಪ್ಲಾಸ್ಟಿಕ್ ಬಿದ್ದಿದ್ದು ಮುಖ್ಯ ರಸ್ತೆಯ ಬದಿಯಲ್ಲೇ ಕಟ್ಟಡ ನಿರ್ಮಿಸಲು ಪರವಾನಿಗೆ ನೀಡಿದ ನಗರಸಭೆ ಅಧಿಕಾರಿಗಳಿಗೆ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದರು.
ಇದೇ ಕಟ್ಟಡದ ಮಾಲೀಕ ನಿಯಮ ಉಲ್ಲಂಘಿಸಿ ಆವರಣ ಗೋಡೆ ನಿರ್ಮಿಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ ಆವರಣ ಗೋಡೆ ನಿರ್ಮಿಸುವುದನ್ನು ನಿಲ್ಲಿಸಿದ್ದ. ಇನ್ನೊಂದೆಡೆ ನಗರದ ಮಧ್ಯವಿದ್ದರೂ 30 ನಿಮಿಷ ವಿಳಂಬ ಬಂದ ಅಗ್ನಿ ಶಾಮಕದಳ ಸಿಬ್ಬಂದಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಕೆಲವೊಂದು ಕಟ್ಟಡಗಳು ಅಗ್ನಿ ಅವಘಡ ಸಂಭವಿಸಿದರೆ ಅಗ್ನಿ ಶಾಮಕ ವಾಹನ ಸಂಚರಿಸಲು ಸಾಧ್ಯವಾಗದಷ್ಟು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವುದಕ್ಕೆ ಇಂತಹ ಕಟ್ಟಡಗಳೇ ಸಾಕ್ಷಿ . ಮೊದಲೇ ರಸ್ತೆಯ ಅಂಚಿನಲ್ಲೆ ನಿರ್ಮಿಸಿದರೆ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಗಳೇ ಇರುವುದಿಲ್ಲ. ಆದ್ದರಿಂದ ರಸ್ತೆಯಲ್ಲೆ ವಾಹನ ಪಾರ್ಕ್ ಮಾಡಿ ವಾಹನ ಸಂಚಾರಕ್ಕೂ, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ ಉಡುಪಿ ನಗರದಾದ್ಯಂತ ಇದೆ .