ಮಂಗಳೂರು,ಜ 03(MSP): ಲಾಭದಲ್ಲಿರುವ ಮತ್ತು ದ.ಕ. ಮೂಲದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಸಂಸದ ನಳಿನ್ ಕುಮಾರ್ ಕಟೀಲು ಮೌನ ಯಾಕೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಜಯ ಬ್ಯಾಂಕ್ ನ್ನು ಯಾವುದೇ ಕಾರಣಕ್ಕೂ ಬ್ಯಾಂಕ್ ಆಪ್ ಬರೋಡಾದಲ್ಲಿ ವಿಲೀನಗೊಳಿಸಬಾರದು. ವಿಜಯಾ ಬ್ಯಾಂಕಿನ ಕೇಂದ್ರ ಹೆಸರನ್ನು ಬದಲಾಯಿಸಬಾರದು, ಅಲ್ಲದೆ ಸ್ಥಳೀಯ ನೌಕರನ್ನು ವಿಜಯ ಬ್ಯಾಂಕ್ ಇಲ್ಲದ ಸ್ಥಳಕ್ಕೆ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು. ವಿಜಯ ಬ್ಯಾಂಕ್ ತುಳುನಾಡಿನ ಸಿರಿಯಾಗಿದ್ದು, ಒಂದು ವೇಳೆ ವಿಲೀನಗೊಂಡರೆ ಗುಜರಾತಿನ ಮಣ್ಣಿನ ಧೂಳಿನಲ್ಲಿ ಸೇರಿ ಹೇಳಹೆಸರಿಲ್ಲದಂತಾಗಬಹುದು ಎಂದು ಕಳಕಳಿ ವ್ಯಕ್ತಪಡಿಸಿದರು.
ಇದಲ್ಲದೆ ವಿಜಯಾ ಬ್ಯಾಂಕ್ ಸುಮಾರು 200 ಕೋ.ರೂ. ಲಾಭದಲ್ಲಿದೆ. ಬರೋಡಾ ಬ್ಯಾಂಕ್ 3 ಸಾವಿರ ಕೋ.ರೂ. ನಷ್ಟದಲ್ಲಿದೆ. ಪ್ರಧಾನಿ ತನ್ನ ತವರು ರಾಜ್ಯದ ಬ್ಯಾಂಕನ್ನು ಉಳಿಸುವ ಸಲುವಾಗಿ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ವಿಜಯ ಬ್ಯಾಂಕ್ ನ್ನು ಕೇಂದ್ರ ಸರ್ಕಾರ ಗುಜರಾತಿನ ಬ್ಯಾಂಕಿಗೆ ಮಾರಿ ವಿನಾಕಾರಣ ಅಪೋಶನ ತೆಗೆದುಕೊಂಡರೂ ಜಿಲ್ಲೆಯ ಲೋಕಸಭಾ ಸದಸ್ಯರೂ ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ದಕ್ಷಿಣ ಕನ್ನಡವನ್ನು ಪ್ರಧಾನಿ ಮೋದಿ ಉತ್ತರಪ್ರದೇಶದ ಜಿಲ್ಲೆಯನ್ನಾಗಿ ಒಂದು ವೇಳೆ ಘೋಷಿಸಿದ್ರೂ ಸಂಸದರು ,ಬಿಜೆಪಿಗರು ಮಾತ್ರ ತುಟಿಪಿಟಕ್ ಎನ್ನಲಾರರು ಎಂದು ಆರೋಪಿಸಿದರು.