ಕುಂದಾಪುರ, ಜ 03(MSP): ವಿವಿಧ ತಳಿಗಳ ಹಸು ಕರುಗಳು ಅಂಬಾ ಎನ್ನುವಾಗ ಹೊಮ್ಮುತ್ತಿದ್ದ ಸ್ವರ ಸಂಗೀತ ರಸಮಂಜರಿಯನ್ನು ಉಣ್ಣಿಸುವ ಮೂಲಕ ಕೆದೂರು ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಜಾನುವಾರು ಜಾತ್ರೆಗೆ ತೆರೆದುಕೊಂಡಿತು. ಚಾಂಪಿಯನ್ ಬ್ರೀಡ್ (ಹೆಚ್ಎಫ್ ತಳಿ), ಜರ್ಸಿ ತಳಿ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ತಳಿಗಳ ಜಾನುವಾರುಗಳು ಇಂದು ನಡೆದ ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರ ಕಣ್ಮನ ಸೆಳೆದವು.
ಹೌದು. ಉಡುಪಿ ಜಿಲ್ಲಾ ಪಂಚಾಯತ್, ಪಶು ಪಾಲನ ಮತ್ತು ಉಡುಪಿ ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆ, ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘ, ಕೆದೂರು ಗ್ರಾಮ ಪಂಚಾಯತ್, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.), ಲಕ್ಷ್ಮೀ ಫೀಡ್ಸ್ ಮಂದಾರ್ತಿ, ಸರ್ವೋದಯ ಏಜನ್ಸೀಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕೆದೂರು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಜಾನುವಾರು ಪ್ರದರ್ಶನ 2019ರ ವಿಶೇಷ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಆಕರ್ಷಣೆ ಜಾನುವಾರು ಪ್ರಿಯರನ್ನು ಸೆಳೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಗ್ರಾಮೀಣ ಭಾಗದಲ್ಲಿ ಇಂತಹ ಜಾನುವಾರು ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆದಾಗ ಹೈನುಗಾರರು ಹಾಗೂ ಕೃಷಿಕರನ್ನು ಪ್ರೋತ್ಸಾಹಿಸಿದಂತಾಗುವುದು. ಈ ನಿಟ್ಟಿನಲ್ಲಿ ಯುವ ಸಮುದಾಯಗಳನ್ನು ಕೃಷಿ ಚಟುವಟಿಕೆಯೆಡೆಗೆ ಆಸಕ್ತರನ್ನಾಗಿಸುವ ಮಹತ್ವದ ಕಾರ್ಯವಾಗಬೇಕಾಗಿದೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಹೆಚ್ಚಿನ ಲಾಭದಾಯಕ ಉದ್ಯಮವನ್ನಾಗಿಸಲು ಮಾಹಿತಿ ಹಾಗೂ ಅರಿವಿನ ಅಗತ್ಯವಿದೆ ಎಂದರು.
೯೦ರ ದಶಕದ ಆರಂಭದಲ್ಲಿ ಕೆದೂರು ಗ್ರಾಮದಲ್ಲಿ ಡೈರಿ ಸ್ಥಾಪಿಸಲು ಸ್ವಲ್ಪ ಮಟ್ಟಿಗೆ ಕಷ್ಟಸಾಧ್ಯವಾಯಿತು. ಬದಲಾದ ಕಾಲದಲ್ಲಿ ನಮ್ಮೂರಿನ ಎಷ್ಟೊಂದು ಮಂದಿ ರೈತರು ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡಬೇಕು ಎನ್ನುವ ಭಾವನೆ ಬಂದಿದ್ದು ನಮ್ಮೂರಿನಲ್ಲಿ ವಿಶೇಷವಾಗಿ ಕ್ಷೀರ ಕ್ರಾಂತಿ ಆಗುತ್ತಿದೆ, ಇದು ನಮ್ಮೂರಿನ ಅಭಿವೃದ್ಧಿಯ ಪ್ರತಿರೂಪ ಎಂದು ಮಾಜಿ ತಾ.ಪಂ.ಸದಸ್ಯ ಕೆದೂರು ಸದಾನಂದ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ ಪಶುಪಾಲನಾ ಇಲಾಖಾ ಉಪ ನಿರ್ದೇಶಕರು ಡಾ|ಸರ್ವೋತ್ತಮ ಉಡುಪ, ಕೊರ್ಗಿ ಗ್ರಾ.ಪಂ.ಅಧ್ಯಕ್ಷೆ ಗಂಗೆ ಕುಲಾಲ್ತಿ, ದಕ್ಷಿಣ ಕನ್ನಡ ಹಾಲು ಒಕ್ಕೂಟ, ಕುಂದಾಪುರ ಘಟಕದ ಉಪ ವ್ಯವಸ್ಥಾಪಕ ಡಾ|ಮನೋಹರ, ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘ(ನಿ.) ಇದರ ಅಧ್ಯಕ್ಷ ಕರುಣಾಕರ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕೆದೂರು ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ಗ್ರಾ.ಪಂ.ಸದಸ್ಯರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ಸಂಪಾವತಿ, ವಿನೋದ, ಹಾಲು ಉತ್ಪಾದಕರ ಸಂಘದ ಅ‘ಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು. ಕೆದೂರು ಗ್ರಾ.ಪಂ.ಅಧ್ಯಕ್ಷ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕೆದೂರು, ಬೇಳೂರು, ಉಳ್ತೂರು, ದೇಲಟ್ಟು, ಗುಳ್ಳಾಡಿ, ಮೊಗೆಬೆಟ್ಟು, ಚಾರುಕೊಟ್ಟಿಗೆ, ಕೊರ್ಗಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಟ್ಟು ೮೦ಕ್ಕೂ ಅಧಿಕ ಜಾನುವಾರುಗಳು ಭಾಗವಹಿಸಿದ ಈ ಪ್ರದರ್ಶನದಲ್ಲಿ ಚಾಂಪಿಯನ್ ಬ್ರೀಡ್ (ಹೆಚ್ಎಫ್ ತಳಿ) ಪ್ರಶಸ್ತಿಯನ್ನು ಶಾಹಿದ್ ಮನ್ಸೂರ್ ಗುಳ್ಳಾಡಿ ಪಡೆದುಕೊಂಡರು. ಜರ್ಸಿ ತಳಿ ವಿಭಾಗದಲ್ಲಿ ರಾಮಚಂದ್ರ ಭಟ್ ಶಾನಾಡಿ ಪ್ರಥಮ, ಸತೀಶ್ ಕಾಮತ್ ದ್ವಿತೀಯ ಸ್ಥಾನ ಪಡೆದುಕೊಂಡರೆ, ಹೆಚ್ಎಫ್ ತಳಿ ವಿಭಾಗದಲ್ಲಿ ಶಾಹಿದ್ ಮನ್ಸೂರ್ ಗುಳ್ಳಾಡಿ ಪ್ರಥಮ, ಭಾಸ್ಕರ ಶೆಟ್ಟಿ ಕೆದೂರು ದ್ವಿತೀಯ ಸ್ಥಾನ, ದೇಸಿ ತಳಿ ವಿಭಾಗದಲ್ಲಿ ರಾಜೇಂದ್ರ ಶೆಟ್ಟಿ ಬೇಳೂರು ಪ್ರಥಮ ಸ್ಥಾನ, ರಾಮಕೃಷ್ಣ ಬಾಯರಿ ಬೇಳೂರು ದ್ವಿತೀಯ ಸ್ಥಾನ , ಕರುಗಳ ವಿಭಾಗದಲ್ಲಿ ಸುಶೀಲಾ ಸೋಮಯಾಜಿ ಪ್ರಥಮ ಸ್ಥಾನ, ಬಸವ ಶೆಟ್ಟಿ ಕೆದೂರು ದ್ವಿತೀಯ ಸ್ಥಾನ ಹಾಗೂ ವಿಶೇಷ ಗುರುತಿಸುವಿಕೆಯಲ್ಲಿ (ಗಿರ್ ತಳಿ) ಶಿವರಾಂ ಪೂಜಾರಿ ಬಹುಮಾನವನ್ನು ಪಡೆದಿದ್ದಾರೆ.
ಕುಂದಾಪುರ ತಾಲೂಕು ಪಶು ಪಾಲನಾ ಇಲಾಖೆಯ ಸಹ ನಿರ್ದೇಶಕ ಡಾ| ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಉಳ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ(ನಿ.) ಕಾರ್ಯನಿರ್ವಾಹಕ ಪ್ರತಾಪ್ ಶೆಟ್ಟಿ ಉಳ್ತೂರು, ಕೆದೂರು ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ| ನಿರಂಜನ್ ಮೂರ್ತಿ ವಂದಿಸಿದರು.