ಕುಂದಾಪುರ,ಜ 04(MSP): ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ನಾಪತ್ತೆಯಾಗಿದ್ದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದಂತೆ ಕುಮದಾಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ಮಾಲತಿ ಶೆಟ್ಟಿಯನ್ನು ಕರೆದೊಯ್ಯಲು ಬಳಸಿದ ಮಾರುತಿ ಓಮ್ನಿ ಮಾಲಕ ಹರ್ಷ, ಹುಲಿಯ, ಗೋಪಾಲ(ಚೀಂಕ್ರ), ದಿನೇಶ, ಸಂದೀಪ, ಪ್ರದೀಪ(ಸೂರ) ಎಂದು ಗುರುತಿಸಲಾಗಿದೆ.
ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಕಂದಾವರದ ಹೆಬ್ಬಾಗಿಲು ಮನೆಯ ವಾಸಿಯಾಗಿದ್ದ ಮಾಲತಿ ಶೆಟ್ಟಿ (65) 2015 ನೇ ಇಸವಿಯ ಜೂನ್ 24 ರ, ಬುಧವಾರ ಮನೆಯಲ್ಲಿ ಸಂಬಂಧಿಕರ ಮನೆಗೆ ತೆರಳುವೆ ಎಂದು ಹೇಳಿ ಹೊರಟವರು ನಾಪತ್ತೆಯಾಗಿದ್ದರು. ಈ ಬಗ್ಗೆ ಸುದ್ಧಿ ತಿಳಿದ ಅವರ ಮಗ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸತೀಶ್ ಶೆಟ್ಟಿ ಜುಲೈ ೪ರಂದು ಊರಿಗೆ ಬಂದು ತಾಯಿಯ ಹುಡುಕಾಟ ನಡೆಸಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಾದರೂ ಮಾಲತಿ ಶೆಟ್ಟಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದರು.
ಮಾಲತಿ ಶೆಟ್ಟಿ ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಮೈಮೇಲೆ 3.7 ಲಕ್ಷ ಬೆಲೆಬಾಳುವ ಚಿನ್ನಾಭರಣ ಧರಿಸಿದ್ದರು. ಇದರಿಂದಾಗಿ ಚಿನ್ನಾಭರಣದ ಆಸೆಗೆ ಯಾರಾದರೂ ದುಷ್ಕೃತ್ಯ ಎಸಗಿರಬಹುದು ಎನ್ನುವ ಅನುಮಾನಗಳೂ ಕಾಡಿತ್ತು. ಆದರೆ ಮಾಲತಿ ಶೆಟ್ಟಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತು ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಲು ಅಸಾಧ್ಯವಾದ ಕಾರಣಕ್ಕೆ ಮಾಲತಿ ಶೆಟ್ಟಿ ಮಗ ಸತೀಶ್ ಶೆಟ್ಟಿ ಕರ್ನಾಟಕ ರಾಜ್ಯ ಹೈಕೋರ್ಟಿನಲ್ಲಿ ತಾಯಿಯನ್ನು ಹುಡುಕಿಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧಿಸಿ ನ್ಯಾಯಾಲಯ ತನಿಖೆ ಕೈಗೆತ್ತಿಕೊಂಡ ಸಂದರ್ಭ ನ್ಯಾಯಾಲಯಕ್ಕೆ ಅನಾಮಧೇಯ ಅರ್ಜಿಯೊಂದು ತಲುಪಿದ್ದು, ಈ ದೂರು ಅರ್ಜಿಯ ಆಧಾರದಲ್ಲಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸುವಂತೇ ನ್ಯಾಯಾಲಯ ಆದೇಶಿಸಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ಅನಾಮದೇಯ ಪತ್ರದಲ್ಲಿ ಮಾಲತಿ ಶೆಟ್ಟಿ ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಸಾಕ್ಷ್ಯಗಳಿವೆ ಎಂದು ತಿಳಿದು ಬಂದಿದೆ.