ವಿರಾಜಪೇಟೆ, ಜ 04(MSP): ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಸನ್ನಿಧಿ ಪ್ರವೇಶಿಸಿ ಸುದ್ದಿಯಾಗಿದ್ದ ಬಿಂದು ಮತ್ತು ಕನಕದುರ್ಗಾ ಎಂಬ ಮಹಿಳೆಯರಿಬ್ಬರಿಗೆ 800 ವರ್ಷಗಳ ಸಂಪ್ರದಾಯವನ್ನು ಮುರಿಬೇಕು ಎನ್ನುವ ಮೊಂಡುಹಟವಿತ್ತೇ ವಿನಾಃ ಭಕ್ತಿಯಿರಲಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
ಯಾಕೆಂದರೆ ಜನವರಿ 2ರಂದು ದೇಗುಲ ಪ್ರವೇಶಿಸುವ ಮುನ್ನಾ ಇವರಿಬ್ಬರು ಡಿ.29ರಂದು ಇಬ್ಬರೂ ವಿರಾಜಪೇಟೆಯ ದೊಡ್ಡ ಚೌಕಿ ಸಮೀಪದ ಸೀತಾಲಕ್ಷ್ಮಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು ಎನ್ನುವ ವಿಚಾರ ಈಗ ಬಹಿರಂಗವಾಗಿದೆ. ಇದೇ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿ ಶಬರಿಮಲೆ ಪ್ರವೇಶಿಸುವ ಬಗ್ಗೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ವಿರಾಜಪೇಟೆ ದೊಡ್ಡೆಟ್ಟಿ ವೃತ್ತದ ಸನಿಹವಿರುವ ಸೀತಾಲಕ್ಷ್ಮೀ ಲಾಡ್ಜ್ ನಲ್ಲಿ ಬಿಂದು ಹೆಸರಿನಲ್ಲಿ ರೂಂ ಬುಕ್ ಮಾಡಲಾಗಿತ್ತು. ಇವರೊಂದಿಗೆ ಒಬ್ಬ ವ್ಯಕ್ತಿಯೂ ಇದ್ದು ಇವರನ್ನು ಬಿಟ್ಟು ವಾಪಸ್ ಹೋಗಿದ್ದನು. ಡಿ.29ರಂದು ಮಧ್ಯಾಹ್ನ 2.12ಕ್ಕೆ ಬಿಂದು ಹಾಗೂ ಕನಕ ದುರ್ಗಾ, ಲಾಡ್ಜ್ ಗೆ ಚೆಕ್ ಇನ್ ಆಗಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಾಡ್ಜ್ ಮಾಲೀಕ ಹರಿಹರನ್ ,ತಮ್ಮ ಹೋಟೇಲ್ ನಲ್ಲಿ ಉಳಿದುಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಸಾಮಾನ್ಯ ಉಡುಗೆಯನ್ನೇ ತೊಟ್ಟಿದ್ದರು. ಅವರು ಯಾವುದೇ ಮಾಲೆ ಧರಿಸಿರಲಿಲ್ಲ ಅಥವಾ ಸಂಪ್ರದಾಯಿಕ ಬಟ್ಟೆ ಹಾಕಿರಲಿಲ್ಲ ಎಂದು ಲಾಡ್ಜ್ ನ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಲಾಡ್ಜ್ ನಲ್ಲಿ ಉಳಿದುಕೊಂಡ ಇವರು ಬಿರಿಯಾನಿ ಸೇವಿಸಿ ಮಾಂಸದೂಟ ಮಾಡಿದ್ದರು ಎನ್ನಲಾಗಿದೆ. ಜತೆಗೆ ಇವರಿಬ್ಬರು ಯಾವುದೇ ವೃತ ಪಾಲಿಸಿರಲಿಲ್ಲ. 2 ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಡಿಸೆಂಬರ್ 31ರಂದು ರೂಂ ಖಾಲಿ ಮಾಡಿದ್ರು.