ಕುಂದಾಪುರ, ಜ 04(MSP): ಕುತೂಹಲ ಕೆರಳಿಸಿದ್ದ ಬೈಂದೂರು ತಾಲೂಕಿನ ಮೂರು ಗ್ರಾಮ ಪಂಚಾಯಿತಿ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಎರಡು ಗ್ರಾಮ ಪಂಚಾಯಿತಿಗಳು ಬಿಜೆಪಿ ಬೆಂಬಲಿತರ ಪಾಲಾಗಿದ್ದರೆ, ಒಂದು ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಕೆರ್ಗಾಲ್ ಗ್ರಾಮ ಪಂಚಾಯಿತಿಯಲ್ಲಿ ತೆರವಾದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕಾನೂನಾತ್ಮಕ ಸಮಸ್ಯೆಗಳಿಂದ ತಡೆ ಹಿಡಿಯಲಾಗಿದ್ದು ಬೈಂದೂರು, ಯೆಡ್ತೆರೆ ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯಿತಿಗಳಿಗೆ ಮರು ಚುನಾವಣೆ ನಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಚುನಾವಣಾ ಪ್ರಚಾರ ನಡೆದಿತ್ತು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು.
ಗಂಗೊಳ್ಳಿಯ ಒಟ್ಟು 33 ಸ್ಥಾನಗಳಲ್ಲಿ 23 ಸ್ಥಾನಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಇಲ್ಲಿ ಆರು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ 4 ಸ್ಥಾನಗಳನ್ನು ಎಸ್.ಡಿ.ಪಿ.ಐ ಪಡೆದುಕೊಂಡಿದೆ.
ಬೈಂದೂರು ಗ್ರಾಮ ಪಂಚಾಯಿತಿಯಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದು, ಬಿಜೆಪಿಯ ನಿರೀಕ್ಷೆಯಂತೆ ಅಧಿಕಾರ ಹಿಡಿದುಕೊಂಡಿದೆ. ಇಲ್ಲಿ ಒಟ್ಟು ಇಪ್ಪತ್ತೊಂದು ಸ್ಥಾನಗಳಿದ್ದು, 17 ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿದ್ದರೆ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪ್ರತಿಷ್ಟೆಯ ಕಣವಾಗಿದ್ದ ಯೆಡ್ತೆರೆಯಲ್ಲಿನ ಚುನಾವಣಾ ಪಳಿತಾಂಶವೂ ಹೊರಬಿದ್ದಿದ್ದು, ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗಿದೆ. ಇಲ್ಲಿ ಒಟ್ಟು ಇಪ್ಪತ್ತೈದು ಸ್ಥಾನಗಳಿದ್ದು 19ನ್ನು ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡಿದ್ದಾರೆ. ಆರು ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಈ ಹಿಂದೆ ಇಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಪಡೆದುಕೊಂಡಿತ್ತು.
ಈ ಬಾರಿಯ ಚುನಾವಣೆಯಲ್ಲಿ ಮತಯಂತ್ರ ಬಳಕೆ ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬಯಮದೂರಿನ ಅಂಬೇಡ್ಕರ್ ಸಭಾಭವನದಲ್ಲಿ ಮತ ಎಣಿಕೆ ಕಾರ್ಯಕ್ರಮ ನಡೆದಿದ್ದು, ಬೈಂದೂರು ತಹಸೀಲ್ದಾರ್ ಕಿರಣ್ ಗೌರಯ್ಯ ಚಾಲನೆ ನೀಡಿದರು.