ಕಾಸರಗೋಡು, ಜ 05(SM): ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನುಭಂಗ ಪ್ರಕರಣಗಳು ನಡೆಯದಂತೆ ಜಿಲ್ಲಾಡಳಿತ ಬಿಗಿ ಕ್ರಮಕೈಗೊಳ್ಳಲು ನಿರ್ಧರಿಸಿದೆ.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ವಿಚಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಭೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿದೆ.
ಹರತಾಳದ ವೇಳೆ ಜಿಲ್ಲೆಯಲ್ಲಿ ಹಿಂಸಾಚಾರ ಸಹಿತ ಕಾನೂನು ಭಂಗ ಪ್ರಕರಣಗಳನ್ನು ನಡೆಸಿದ ಆರೋಪಿಗಳ ಸ್ಪಷ್ಟ ಪತ್ತೆ ನಡೆದಿದ್ದು, ತಕ್ಷಣ ಬಂಧಿಸಲಾಗುವುದು. ಇವರ ವಿರುದ್ಧ ಕಂದಾಯ ಕಾಯಿದೆ ಸಹಿತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಆಸ್ತಿ ಹಾನಿ ಪ್ರಕರಣಗಳ ಕಾರಣಕರ್ತರ ವಿರುದ್ಧ ಕ್ರಮಕೈಗೊಂಡು, ಅವರಿಂದಲೇ ನಷ್ಟ ಪರಿಹಾರ ಈಡುಮಾಡುವ ಕ್ರಮವನ್ನು ನಡೆಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.