ಬೆಂಗಳೂರು, ಜ05(SS): ತೈಲ ಬೆಲೆಯ ನಿರಂತರ ಇಳಿಕೆಯ ಖುಷಿಯಲ್ಲಿದ್ದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ. 2018ರಲ್ಲಿ ತೈಲ ಬೆಲೆ ಗಗನಕ್ಕ ಏರುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯನ್ನು ಕಡಿತ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ತೆರಿಗೆ ಏರಿಕೆ ಮಾಡಿದೆ.
ಪೆಟ್ರೋಲ್ ಮೇಲಿನ ತೆರಿಗೆಯನ್ನು 3.25% ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 3.27% ರಷ್ಟು ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಶೇ 28.75 ರಷ್ಟಿದ್ದ ಪೆಟ್ರೋಲ್ ಮೇಲಿನ ತೆರಿಗೆ ಶೇ 32ಕ್ಕೆ ಏರಿಕೆಯಾಗಿದೆ. ಡೀಸೆಲ್ ಮೇಲಿನ ತೆರಿಗೆ ಶೇ 17.73ರಿಂದ ಶೇ 21ಕ್ಕೆ ಹೆಚ್ಚಳವಾಗಿದೆ. ಪರಿಣಾಮ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 70.84ಕ್ಕೆ ತಲುಪಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 64.66 ರೂ. ಇದೆ.
ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು.
2018ರ ಸೆಪ್ಟೆಂಬರ್ ತಿಂಗಳಿನಲ್ಲಿ ತೈಲ ಬೆಲೆ ಏರಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದರೆ, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಿತ್ತು. ಹೀಗಾಗಿ ಒಟ್ಟು 2.50 ರೂ ಕಡಿತವಾಗಿತ್ತು. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯನ್ನು ಕಡಿತ ಮಾಡಿದ್ದ ರಾಜ್ಯ ಸರ್ಕಾರ, ತೆರಿಗೆ ಏರಿಕೆ ಮಾಡಿದೆ.