ಕಾಸರಗೋಡು, ಅ 23: ಸರಕಾರೀ ಆಸ್ಪತ್ರೆಗಳಲ್ಲಿ 24 ಗಂಟೆಯೂ ಅದರಲ್ಲೂ ರಾತ್ರಿ ಸಮಯ ಮರಣೋತ್ತರ ಪರೀಕ್ಷೆ ನಡೆಸಬೇಕೆಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಇದಕ್ಕೆ ಕೇರಳದಲ್ಲಿ ಈ ಹಿಂದಿನ ಯು ಡಿ ಎಫ್ ಸರಕಾರ ಇದಕ್ಕೆ ಅನುಮತಿ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಕೆಲ ವೈದ್ಯರು ನ್ಯಾಯಾಲಯ ಮೊರೆ ಹೋಗಿದ್ದು , ತಡೆಯಾಜ್ಞೆ ತಂದಿರುವುದರಿಂದ ಇದೀಗ ಸರಕಾರದ ಆದೇಶ ಅನುಷ್ಠಾನ ಗೊಂಡಿಲ್ಲ. ಈ ಹಿನ್ನಲೆಯಲ್ಲಿ ರಾತ್ರಿ ಸಮಯದಲ್ಲಿ ಮರಣೋತ್ತರ ಪರೀಕ್ಷೆಯ ವಿರುದ್ಧ ವೈದ್ಯರ ನಿಲುವು ಪ್ರಶ್ನಿಸಿ ಶಾಸಕ ಎನ್.ಎ.ನೆಲ್ಲಿಕುನ್ನು ಹೈಕೋರ್ಟ್ನಲ್ಲಿ ಮೊರೆ ಹೋಗಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಸರಕಾರದ ಸುತ್ತೋಲೆಯ ವಿರುದ್ಧ ಕೇರಳ ಮೆಡಿಕೋ ಲೀಗಲ್ ಸೊಸೈಟಿ ಸಲ್ಲಿಸಿದ ಅರ್ಜಿಯಲ್ಲಿ ಕಕ್ಷಿದಾರರನಾಗಿಸಬೇಕು ಎಂದು ಆಗ್ರಹಿಸಿ ಶಾಸಕ ಎನ್.ಎ.ನೆಲ್ಲಿಕುನ್ನು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ದ್ದಾರೆ.
ರಾತ್ರಿ ಕಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಕ್ಕಾಗಿ ಗುಜರಾತ್ , ಕರ್ನಾಟಕ, ತಮಿಳುನಾಡು ಸರಕಾರಗಳು ಕೈಗೊಂಡ ವಿಷಯಗಳ ಕುರಿತು ಶಾಸಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರತೀ ವರ್ಷ ಕೇರಳದಲ್ಲಿ 20,000ದಷ್ಟು ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದು, ಆದರೆ ಸಂಜೆ ನಾಲ್ಕು ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸುತ್ತಿಲ್ಲ. ಸಂಜೆ ಅಪಘಾತ , ಅಥವಾ ದುರಂತ ನಡೆದ್ದಲ್ಲಿ ಮರು ದಿನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಹಲವು ಮಂದಿಗೆ ಸಮಸ್ಯೆ ತಲೆ ದೋರುತ್ತಿದ್ದು
ರಾತ್ರಿ ಸಮಯದಲ್ಲೂ ನಡೆಸುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರಶ್ನಿಸಿದ ಪರಿಣಾಮ ಕೇರಳದ ಐದು ವೈದ್ಯಕೀಯ ಕಾಲೇಜು, ಕಾಸರಗೋಡು ಜನರಲ್ ಆಸ್ಪತ್ರೆಗಳಲ್ಲಿ ರಾತ್ರಿ ಸಮಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಸರಕಾರಿ ಸುತ್ತೋಲೆ ಹೊರಡಿಸಿತ್ತು. ರಾತ್ರಿ ಸಮಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದರಿಂದ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ಕೇರಳ ಮೆಡಿಕೋ ಲೀಗಲ್ ಸೊಸೈಟಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಕಾಸರಗೋಡು ಶಾಸಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.