ಮಂಗಳೂರು, ಜ 06 (MSP): ಕರಾವಳಿ ಮೂಲದ ವಿಜಯಾ ಬ್ಯಾಂಕ್ ನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ದೇನಾ ಬ್ಯಾಂಕ್ನೊಂದಿಗೆ ವಿಲೀನ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಜ.8 ರಂದು ಮಂಗಳೂರು ಗಾಂಧಿಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ತಿಳಿಸಿದರು.
ಇವರು ಜ೦೬ ರ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಕರ್ನಾಟಕದ ಅದರಲ್ಲೂ ಕರಾವಳಿ ಮೂಲದ ವಿಜಯಾ ಬ್ಯಾಂಕ್ ನ್ನು, ನಷ್ಟದಲ್ಲಿರುವ ಮಹಾರಾಷ್ಟ್ರದ ದೇನಾ ಬ್ಯಾಂಕ್ ಮತ್ತು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ (ಬಿಒಬಿ)ಗಳ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ಗಾಂಧಿಪ್ರತಿಮೆ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅಲ್ಲದೆ ಜ.10 ರಂದು ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಪ್ರತಿ ವಿಜಯ ಬ್ಯಾಂಕ್ ಶಾಖೆಯ ಮುಂದೆ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲು ಈ ಬಗ್ಗೆ ಮೌನ ವಹಿಸಿರುವುದು ಯಾಕೆ? ಅವರ ಮೌನವನ್ನು ಗಮನಿಸಿದಾಗ ಬ್ಯಾಂಕ್ ಗಳ ವಿಲೀನದಲ್ಲಿ ಅವರದೇ ಮುಂದಾಳತ್ವ ಇರುವಂತೆ ಕಾಣಿಸುತ್ತದೆ ಎಂದು ಆರೋಪಿಸಿದರು.