ಬೆಂಗಳೂರು, ಜ06 (MSP): ಮೋಟಾರ್ ವಾಹನ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿವೆ. ಇದು ಚಾಲಕರ ವಿರೋಧಿ ಮಸೂದೆ ಅಂತಾ ಸಾರಿಗೆ ಇಲಾಖೆ ಕಾರ್ಮಿಕರು ಕಿಡಿಕಾರಿದ್ದು ಈ ಹಿನ್ನಲೆಯಲ್ಲಿ ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ಗೆ ಕರೆಕೊಟ್ಟಿದೆ.
ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ. ಈ ಪ್ರತಿಭಟನೆಗೆ ಎಐಟಿಯುಸಿ, ಸಿಐಟಿಯು, ಐಎನ್ಟಿಯುಸಿ, ಎಲ್ಪಿಎಫ್ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಮಸೂದೆ ಹಿಂಪಡಿಯಬೇಕು ಹಾಗೂ ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬಂದ್ ಕರೆಯಿಂದ ರಾಜ್ಯದಲ್ಲಿ ಜನವರಿ 8 ಮತ್ತು 9 ರಂದು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.