ಉಡುಪಿ, ಜ 07(MSP): ವೀಕೆಂಡ್ ನಲ್ಲಿ ಸಿನಿಮಾ ವೀಕ್ಷಿಸಲು ದಂಪತಿ ಚಿತ್ರಮಂದಿರಕ್ಕೆ ತೆರಳಿದ್ದು, ಸಿನಿಮಾ ಇಂಟರ್ವೆಲ್ ಬಳಿಕ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಐನಾಕ್ಸ್ ಚಿತ್ರ ಮಂದಿರಕ್ಕೆ ಶುಕ್ರವಾರ ಸಂಜೆ ವೇಳೆಗೆ ’ಸಿಂಬ’ ಸಿನಿಮಾ ನೋಡಲೆಂದು ಕಟಪಾಡಿ ನಿವಾಸಿ ಲಾಯ್ಡ್ ಮೊಂತೆರೋ ಪತ್ನಿ ಜೆನ್ ಡಿ.ಕ್ರೂಸ್ (28) ಜತೆ ತೆರಳಿದ್ದರು. ಸಿನಿಮಾ ಇಂಟರ್ ವೆಲ್ ಸಂದರ್ಭ ಪತ್ನಿ ಜೆನ್ ಡಿ.ಕ್ರೂಸ್ ವಾಷ್ ರೂಂ ಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ್ದಾರೆ. ಇತ್ತ ಪತಿ ಎಷ್ಟು ಕಾದರೂ ಪತ್ನಿ ವಾಪಾಸು ಬಾರದೆ ಇದ್ದಾಗ ಪತಿ ಚಿತ್ರಮಂದಿರವೆಲ್ಲ ಹುಡುಕಾಡಿ ಸಿಬ್ಬಂದಿಯೊಡನೆ ವಿಚಾರಿಸಿದರು. ಆದರೆ ಸುಳಿವು ಪತ್ತೆಯಾಗಿಲ್ಲ ಜೆನ್ ಅತ್ತ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ.
ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದಾರೆ. ಲಾಯ್ಡ್ ಮೊಂತೆರೋ ಹಾಗೂ ಜೆನ್ ಅವರ ವಿವಾಹ ಡಿಸೆಂಬರ್ ೩೧ ರಂದು ಉಡುಪಿ ಕಿದಿಯೂರು ಹೊಟೇಲ್ ನಲ್ಲಿ ವಿಜ್ರಂಭಣೆಯಿಂದ ನಡೆದಿತ್ತು. ಇವರ ಮದುವೆ 1 ವರ್ಷದ ಹಿಂದೆಯೇ ನಿಶ್ಚಯವಾಗಿತ್ತು. ಲಾಯ್ಡ್ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ನಾಪತ್ತೆಯಾಗಿರುವ ಜೆನ್ ಮಂಗಳೂರಿನ ಹೆಸರಾಂತ ಹೊಟೇಲ್ ನಲ್ಲಿ ಸ್ವಾಗತಕಾರಣಿಯಾಗಿ ದುಡಿಯುತ್ತಿದ್ದಳು. ಜೆನ್ ಅವರ ತಂದೆ ಮುಂಬೈ ಯಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದು 5 ವರ್ಷದ ಹಿಂದೆ ನಿಧನರಾದ ಬಳಿಕ ಸೋದರ ಮಾವನ ಮನೆ ಮೂಡುಬಿದಿರೆಯಲ್ಲಿ ಇದ್ದು ಅಲ್ಲಿಂದಲೇ ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಪತ್ನಿ ನಾಪತ್ತೆಯಾದ ಬಗ್ಗೆ ಪತಿ ಲಾಯ್ಡ್ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ . ಪೊಲೀಸರು ಚಿತ್ರಮಂದಿರದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಹಿಂದಿ, ಇಂಗ್ಲೀಷ್ , ಕನ್ನಡ ಬಲ್ಲವರಾದ ಇವರು ಕಂಡುಬಂದರೆ ಮಣಿಪಾಲ ಠಾಣೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.