ಮಂಗಳೂರು, ಜ 07(MSP): ಶಬರಿಮಲೆಯಲ್ಲಿ ಎಲ್ಲಾ ಮಹಿಳೆಯರೂ ಪ್ರವೇಶ ಮಾಡಲು ಕೇರಳ ಸರಕಾರ ಸರಿಯಾದ ಕ್ರಮ ಕೈಗೊಳ್ಳಲಿ. ಮಹಿಳೆಯರು ದೇವರ ಮಕ್ಕಳಲ್ಲವೇ? ಎಲ್ಲಾ ಮಹಿಳೆಯರು ಅಯ್ಯಪ್ಪನ ಕ್ಷೇತ್ರಕ್ಕೆ ಪ್ರವೇಶಿಸುವಂತಾದರೆ ದೇವರು ಮೆಚ್ಚುತ್ತಾರೆ. ಇದಕ್ಕಾಗಿ ಪಿಣರಾಯಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಅವರು ಜ.7 ರ ಸೋಮವಾರ ಕುದ್ರೋಳಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಶಬರಿಗಿರಿಗೆ ಮಹಿಳೆಯ ಪ್ರವೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಬರಿಮಲೆಯ ವಿಚಾರವನ್ನು ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ದುರುದ್ದೇಶವನ್ನಿಟ್ಟುಕೊಂಡು ಲಾಭಕ್ಕಾಗಿ ಇದಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಅದು ಕಾಂಗ್ರೆಸ್ ,ಬಿಜೆಪಿ ಅಥವಾ ಇನ್ಯಾವುದೋ ಪಕ್ಷವಾಗಲಿ ಅಥವಾ ವ್ಯಕ್ತಿಯಾಗಲಿ ಮಹಿಳೆಯ ಪ್ರವೇಶ ವಿರೋಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಮಾತೃ ದೇವೋ ಭವ ಎನ್ನುವ ಸಂಸ್ಕೃತಿ ನಮ್ಮದು. ಹೀಗಿರುವಾಗ ಅಯ್ಯಪ್ಪ ಸ್ವಾಮಿ ಮಹಿಳೆಯರ ಪ್ರವೇಶವನ್ನು ಬೇಡ ಎನ್ನಲಿಲ್ಲ. ವಿರೋಧಿಸುವವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಮಹಿಳೆಯರು ಕೂಡಾ ದೇವರ ಮಕ್ಕಳಲ್ಲವೇ ? ಎಂದು ಪ್ರಶ್ನಿಸಿದ ಅವರು ಮಹಿಳೆಯರಿಗೆ ದ್ರೋಹ ಬಗೆಯದಂತೆ ಸಿಎಂ ತಮ್ಮ ಕರ್ತವ್ಯ ಪಾಲಿಸಿ ಎಲ್ಲಾ ಮಹಿಳೆಯರ ಪ್ರವೇಶಕ್ಕೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಿ ಎಂದು ಆಗ್ರಹಿಸಿದರು.
ಪ್ರೊ.ಭಗವಾನ್ ವಿರುದ್ದ ಕಿಡಿ
ಇನ್ನು ಪ್ರೊ ಭಗವಾನ್ ರಾಮನ ವಿರುದ್ಧ ಅವಹೇಳನಕಾರಿಯಾಗಿ ಬರೆದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀ ರಾಮ ಇದ್ದಾಗ ಭಗವಾನ್ ಹುಟ್ಟಿದ್ದರೇ?ಶ್ರೀರಾಮ ಮಾಂಸ ಭಕ್ಷಿಸುವುದನ್ನು ಇವರು ನೋಡಿದ್ದಾರೆಯೇ? ನಾಲಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಇವರ ದುರುದ್ದೇಶ ಗಲಾಟೆ ಹುಟ್ಟುಹಾಕುವುದು ಮಾತ್ರ, ಇವರಿಂದಾಗಿ ಎಷ್ಟು ಕುಟುಂಬ ಹಾಳಾಯಿತೋ? ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆಗೆ ಸ್ಪರ್ಧಿಸುತ್ತೇನೆ
ಟಿಕೆಟ್ ದೊರಕಿದ್ರೆ ಮುಂಬರುವ ಲೋಕಸಭೆಗೆ ಸ್ವರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು ಇದಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದರು. ಟಿಕೆಟ್ಗಾಗಿ ದೆಹಲಿವರೆಗೆ ಹೋಗುತ್ತೇನೆ, ಕಾದು ನೋಡಿ ಎಲ್ಲಾ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.