ಚಿತ್ರದುರ್ಗ,ಜ 07(MSP): ಸದನದಲ್ಲಿ ಅಂಗಿ ಹರಿದುಕೊಂಡು ಸುದ್ದಿಯಾಗಿದ್ದ ಮಾಜಿ ಸಚಿವ ಹಾಗೂ ಹೊಸದುರ್ಗ ಕ್ಷೇತ್ರದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ಠಾಣೆ ಎದುರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜ.6 ರ ಭಾನುವಾರ ರಾತ್ರಿ ನಡೆದಿದೆ.
ಮರಳು ಮಾಫಿಯಾ ವಿರುದ್ದ ಕಿಡಿಕಾರಿದ ಇವರು ಮರಳು ದಂಧೆಗೆ ಕಡಿವಾಣ ಹಾಕದೆ ಪೊಲೀಸರು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ಠಾಣೆ ಎದುರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಮರಳು ಗಣಿಗಾರಿಕೆ ವಿಚಾರದಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ನನ್ನ ಕರೆಗೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂದಾದರೆ ಶಾಸಕನಾಗಿ ನಾನಿದ್ದು ಪ್ರಯೋಜನವೇನು ಎಂದು ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದಾಗ ಅವರ ಬೆಂಬಲಿಗರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಘಟನೆಯಿಂದ ಗೂಳಿಹಟ್ಟಿ ಅವರ ಕಿವಿ, ಮೂಗು ಬಾಯಲ್ಲಿ ಪೆಟ್ರೋಲ್ ಹೋಗಿ ಅಸ್ವಸ್ಥರಾಗಿದ್ದು ತಕ್ಷಣ ಅವರನ್ನು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.