ಮಂಗಳೂರು, ಜ 07(SM): ಇಂದು ನಡೆಯಲಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ನಡೆಸುವ ಕುರಿತಂತೆ ನಮ್ಮಲ್ಲಿ ಯಾರೂ ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ಬಂದ್ ನಡೆಸದಂತೆ ಬಿಗಿ ಪೊಲೀಸ್ ಬಂದೋಬಸ್ತನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಯಾರಾದರೂ ಬಂದ್ಗೆ ಅನುಮತಿ ಕೇಳಿದರೆ ನೀಡಬಹುದು. ಆದರೆ ನಮ್ಮಲ್ಲಿ ಯಾರೂ ಅನುಮತಿ ಕೇಳಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇಲಾಖೆಯಿಂದ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದರು.
ಜನ ಜೀವನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಕಾನೂನು ಕೈಗೆತ್ತಿಕೊಂಡಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇನ್ನುಳಿದಂತೆ ಆಟೋ, ಬಸ್ಸುಗಳ ಸಂಚಾರ ಎಂದಿನಂತೆ ಇರಲಿದೆ. ಎಲ್ಲೂ ಕೂಡ ಅಹಿತಕರ ಘಟನೆ ನಡೆಯದಂತೆ ಕೆಎಸ್ಆರ್ಪಿ ತುಕಡಿ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.