ಬೆಳ್ತಂಗಡಿ,ಜ 08 (MSP): ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಮರೋಡಿ ಗ್ರಾಮ ಅಸತ್ತೆ ನಿವಾಸಿ ಶುಭಕರ ಪೂಜಾರಿ ಅವರ ಪುತ್ರ ಯೋಗೀಶ್ (22) ಮೃತಪಟ್ಟಿದ್ದಾರೆ. ಅವರು ತಂದೆ, ತಾಯಿ, ಇಬ್ಬರು ಸಹೋದರರು ಆಗಲಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಯೋಗೀಶ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಎರಡು ವಾರದ ಹಿಂದೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಜ.೦೭ರ ಸೋಮವಾರ ಮುಂಜಾನೆ ಕೆಲಸಕ್ಕೆಂದು ಕಂಪನಿಗೆ ಹೊರಟಿದ್ದು, ಈ ಸಂದರ್ಭ ಹೆಜ್ಜಾಳ ಗೇಟ್ ಹತ್ತಿರ ಹೆದ್ದಾರಿ ದಾಟುವಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಯೋಗೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಸಹೋದ್ಯೋಗಿ ಚೇತನ್ ಕುಮಾರ್ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತದೇಹವನ್ನು ಸೋಮವಾರ ರಾತ್ರಿ ಮರೋಡಿಯ ಮನೆಗೆ ತಂದು, ಅಂತ್ಯಸಂಸ್ಕಾರ ನಡೆಸಲಾಯಿತು.