ಮುಡಿಪು,ಜ 08 (MSP): ಶಬರಿಮಲೆ ಯಾತ್ರೆಗೆ ತೆರಳಲು ಅಂತಿಮ ಸಿದ್ದತೆಯಲ್ಲಿ ನಿರತರಾಗಿದ್ದ ಗುರುಸ್ವಾಮಿ ಹೃದಯಾಘಾತದಿಂದ ಮೃತಪಟ್ಟ ಘಟನೆಇರಾ ಗ್ರಾಮದ ಮೂಳೂರಿನಲ್ಲಿ ಸೋಮವಾರಯಲ್ಲಿ ನಡೆದಿದೆ. ಮೃತಪಟ್ಟವರನ್ನು ಇರಾ ಮೂಳೂರು ನಿವಾಸಿ ಸುರೇಶ್ (50) ಎಂದು ಗುರುತಿಸಲಾಗಿದೆ. ಕಾರ್ಪೆಂಟರ್ ಆಗಿ ಕೆಲಸ ಮಾಡುವ ಅವರು ಕಳೆದ ಹಲವಾರು ವರ್ಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಾ ಬಂದಿದ್ದು, ಸುರೇಶ್ ಗುರುಸ್ವಾಮಿ ಎಂದೇ ಪ್ರಸಿದ್ದರಾಗಿದ್ದರು.
ಸೋಮವಾರದಂದು ತನ್ನ ತಂಡ 25 ಮಂದಿ ಅಯ್ಯಪ್ಪ ಸ್ವಾಮಿಗಳೊಂದಿಗೆ ಇರುಮುಡಿ ಕಟ್ಟುವ ನಿಟ್ಟಿನಲ್ಲಿ ಬೆಳಗ್ಗೆ ಸ್ನಾನ ಮಾಡಿ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಗೆ ತೆರಳುತ್ತಿದ್ದಾಗ ಕುಸಿದು ಬಿದ್ದರು.ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅವರು ಮೃತಪಟ್ಟರು. ಸುಮಾರು ೩೮ ವರ್ಷಗಳಿಂದ ನಿರಂತರವಾಗಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದ ಸುರೇಶ್ ಅವರು ಒಟ್ಟು ಮೂರು ಬಾರಿ ಮಲೆಗೆ ಪಾದಯಾತ್ರೆ ಮಾಡಿದ್ದರು. ಸುರೇಶ್ ಅವರ ಪುತ್ರನೂ ಅಯ್ಯಪ್ಪ ವ್ರತಧಾರಿಯಾಗಿದ್ದು, ತಂದೆಯ ನಿಧನದಿಂದಾಗಿ ಮಾಲೆ ತೆಗೆದಿದ್ದಾರೆ.
ಅನ್ನ ಅನಾಥಶ್ರಮಕ್ಕೆ: ಇರುಮುಡಿ ಕಾರ್ಯಕ್ರಮ ಇದ್ದದ್ದರಿಂದ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಗುರುಸ್ವಾಮಿ ಮರಣದಿಂದಾಗಿ ಸಿದ್ಧವಾಗಿದ್ದ ಅನ್ನ, ಪದಾರ್ಥಗಳನ್ನು ಸ್ಥಳೀಯ ಅನಾಥಾಶ್ರಮಕ್ಕೆ ನೀಡಲಾಗಿದೆ. ಸಂಜೆ ವೇಳೆಗೆ ಮಲೆಗೆ ತೆರಳಲಿದ್ದ ಸ್ವಾಮಿಗಳಿಗೆ ಇರಾ ಸಮೀಪದ ಬದಲಿ ವ್ಯವಸ್ಥೆ ಮಾಡಿ ಇರುಮುಡಿ ಕಟ್ಟಲಾಯಿತು.