ಬೆಂಗಳೂರು, ಜ 09 (MSP): ‘ಮನೆಯ ಮುಂದಿನ ಜಗುಲಿಯಲ್ಲಿ ಕುಳಿತಿದ್ದ ನನ್ನ ತಾಯಿಯನ್ನು ತಂದೆ ಹಾಗೂ ಅಜ್ಜಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು’ ಎಂಬ ಒಂಬತ್ತು ವರ್ಷದ ಮಗನ ಸಾಕ್ಷ್ಯವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪತ್ನಿಯನ್ನು ಕೊಲೆ ಮಾಡಿದ ಕಾರಣಕ್ಕೆ ಪತಿ ಹಾಗೂ ಆತನ ತಾಯಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ.
‘ಮಂಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಆರೋಪಿಗಳಾದ ರವೀಶ ಮತ್ತು ಆತನ ತಾಯಿ ಪಾರ್ವತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ತಿರಸ್ಕರಿಸಿದೆ.
ಪ್ರಕರಣದ ವಿವರ: 2011ರ ಫೆಬ್ರುವರಿ 17ರಂದು ರವೀಶ ಹಾಗೂ ಪಾರ್ವತಿ ಸೇರಿಕೊಂಡು ಸರಸ್ವತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದರು. ವಿಟ್ಲ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ರವೀಶ್ ಮತ್ತು ಸರಸ್ವತಿ ಅವರ ಪುತ್ರ ಲೋಹಿತಾಶ್ವ ಸಾಕ್ಷ್ಯ ನುಡಿದಿದ್ದ. ಘಟನೆ ನಡೆದಾಗ 4 ವರ್ಷದವನಾಗಿದ್ದ ಮೃತಳ ಮಗ ರೋಹಿತಾಶ್ವ ವಿಚಾರಣೆ ಸಂದರ್ಭ 9 ವರ್ಷದವನಾಗಿದ್ದು ಆತ ಹೇಳಿದ ಸಾಕ್ಷಿ ಆಧಾರಿಸಿ ಆ ಇಬ್ಬರಿಗೂ ಶಿಕ್ಷೆ ವಿಧಿಸಿತ್ತು. ಅಮ್ಮನನ್ನು ಕತ್ತಿಯಿಂದ ಹೊಡೆದು ಕೊಂದಿದ್ದ ಅಪ್ಪ ಹಗೂ ಅಜ್ಜಿಯ ಬಗ್ಗೆ ಮಗು ಸಾಕ್ಷ್ಯ ನುಡಿದಿದೆ.ಅದನ್ನು ಆಧರಿಸಿಯೇ ಅಧೀನ ನ್ಯಾಯಾಲಯ ತೀರ್ಪು ನೀಡಿದೆ. ಅದರಲ್ಲಿ ಮತ್ತೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲವೆಂದು ನ್ಯಾಯಪೀಠ ಹೇಳಿದೆ.
‘ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಗ್ರಾಮದಲ್ಲಿ ರವೀಶ ಪತ್ನಿ ಸರಸ್ವತಿಯೊಂದಿಗೆ ವಾಸಿಸುತ್ತಿದ್ದರು. ಪತ್ನಿಯ ಶೀಲದ ಮೇಲೆ ರವೀಶ್ ಅನುಮಾನ ಹೊಂದಿದ್ದರು. ಈ ಕುರಿತು ತಾಯಿ ಪಾರ್ವತಿಯೊಂದಿಗೆ ಚರ್ಚಿಸಿದ್ದರು. ಇದಕ್ಕೆ ಸಾಥ್ ನೀಡಿದ್ದ ತಾಯಿ ಸೊಸೆಯನ್ನು ಕೊಲೆ ಮಾಡುವಂತೆ ಮಗನಿಗೆ ಸೂಚಿಸಿ, ಕೊಲೆಗೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರು’ ಎಂದು ಆರೋಪ ಹೊರಿಸಲಾಗಿತ್ತು.