ಮಂಗಳೂರು, ಜ 09(SM): ಮಲ್ಪೆಯಲ್ಲಿ ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ನಾಪತ್ತೆಯಾದ 7 ಮಂದಿ ಮೀನುಗಾರರು ಸುರಕ್ಷಿತವಾಗಿದ್ದಾರೆ, ಆದರೇ ಕಷ್ಟದಲ್ಲಿದ್ದಾರೆ ಎಂದು ಮೀನುಗಾರರ ಆರಾಧ್ಯ ಬೊಬ್ಬರ್ಯ ದೈವ ಅಭಯ ನೀಡಿದೆ. ಸರಕಾರವು ಮೀನುಗಾರರನ್ನು ಹುಡುಕುವ ಎಲ್ಲಾ ಪ್ರಯತ್ನಗಳು ಇದುವರೆಗೆ ಯಾವುದೇ ಫಲ ನೀಡದೇ ಇರುವುದರಿಂದ, ಬಡಾನಿಡಿಯೂರು 1 ಮತ್ತು 2ನೇ ಮೊಗವೀರ ಗ್ರಾಮಸಭೆಯ ಸಮಸ್ತ ಮೀನುಗಾರರು ಸ್ಥಳೀಯ ತೊಟ್ಟಂ ಬೊಬ್ಬರ್ಯ ದೈವಸ್ಥಾನದಲ್ಲಿ ದೈವ ದರ್ಶನವನ್ನು ಏರ್ಪಡಿಸಿದ್ದರು.
ಪಾತ್ರಿಯ ಮೈಮೇಲೆ ಆವೇಶಗೊಂಡ ದೈವವು ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ದೈರ್ಯ ನೀಡಿ, ಬೆನ್ನ ಹಿಂದೆ ಕಾಯುತ್ತೇನೆ ಎಂದು ಅಭಯ ನೀಡಿತು. ನಾಪತ್ತೆಯಾದ ಮೀನುಗಾರರು ದೇಶದ ಉತ್ತರ ದಿಕ್ಕಿನಲ್ಲಿದ್ದು ಅವರನ್ನು ಹೊರರಾಜ್ಯದವರು ಬಂಧನದಲ್ಲಿರಿಸಿದ್ದಾರೆ.
ಆದರೇ ಮೀನುಗಾರರಿಂದ ಅವರ ಶೋಧ ಅಸಾಧ್ಯ, ಇದಕ್ಕೆ ಸರ್ಕಾರದ ಮುದ್ರೆಯ ಪ್ರಯತ್ನ ಬೇಕು. ಸೈನ್ಯದಿಂದ ಹುಡುಕಿಸಬೇಕು ಎಂದು ದೈವ ನುಡಿ ನೀಡಿದೆ. ಆದರೆ ರಾಜ್ಯ ಸರ್ಕಾರ ಮೀನುಗಾರರನ್ನು ಹುಡುಕುವ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ತೀವ್ರ ಅಸಮಾಧಾನಗೊಂಡ ಬೊಬ್ಬರ್ಯ ದೈವ, ತಾನು ಈ ಹಿಂದೆಯೇ ಅವಘಡವೊಂದು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ನೀವು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದಿದೆ.