ಮಂಗಳೂರು, ಜ 10 (MSP): ಉಳ್ಳಾಲದ ಸುಭಾಸ್ ನಗರದಿಂದ ತಲಪಾಡಿ ವರೆಗಿನ ಕಿನಾರೆಯಲ್ಲಿ ಕಡಲ ಕೊರೆತ ಸಮಸ್ಯೆ ನಿವಾರಣೆಗೆ 159 ಕೋಟಿ ರೂಪಾಯಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಯೋಜನೆಯ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು.
ಸುಭಾಸ್ನಗರದಿಂದ ಕೈಕೊ, ಖೀಲೇರಿಯಾ ನಗರ ಪ್ರದೇಶದವರೆಗೆ 450ಮೀ. ಉದ್ದಕ್ಕೆ 21.09 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣಕಾಮಗಾರಿಗೆ ಡಿಪಿಆರ್ ತಯಾರಾಗಿದ್ದು, ಮುಂದಿನ ತಿಂಗಳಲ್ಲಿ ಟೆಂಡರ್ ಕರೆಯಲಿದೆ ಎಂದು ತಿಳಿಸಿದರು
ಇದಲ್ಲದೆ ಸೋಮೇಶ್ವರದಿಂದ ತಲಪಾಡಿ ತನಕ 134 ಕೋಟಿ ರೂ.ಗಳ ಶಾಶ್ವತ ತಡೆಗೋಡೆ ನಿರ್ಮಾಣ ಯೋಜನೆಗೂ ಮಂಜೂರಾತಿ ಲಭಿಸಿದೆ. ಈ ಎರಡು ಕಾಮಗಾರಿ ಪೂರ್ಣವಾದರೆ ಕ್ಷೇತ್ರದ ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುವುದು ಎಂದು ವಿವರಿಸಿದರು. ಈ ಕಾಮಗಾರಿಗಳನ್ನು ಎಡಿಬಿ ಸಾಲ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಈ ಯೋಜನೆಯ ಬಳಿಕ ಸುರತ್ಕಲ್ನಿಂದ ರಾಜ್ಯದ ಬಾಕಿ ಉಳಿದ ತೀರ ಪ್ರದೇಶದ ಕಡಲ ಕೊರೆತ ಸಮಸ್ಯೆ ಪರಿಹಾರಕ್ಕೆ ತಡೆಗೋಡೆ ನಿರ್ಮಾಣ ಯೋಜನೆಯ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.