ಉಡುಪಿ, ಜ 10 (MSP): ಕೊನೆಗೂ ಮೀನುಗಾರರನ್ನು ಭೇಟಿಯಾದ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ಮೀನುಗಾರ ತೀಕ್ಷ್ಮ ಪ್ರಶ್ನೆಗೆ ಉತ್ತರಿಸಲಾಗದೇ ತಬ್ಬಿಬ್ಬಾದ ಘಟನೆ ನಡೆದಿದೆ. ನನ್ನ ಕ್ಷೇತ್ರದಲ್ಲಿ ಪಶು ಮೇಳವಿತ್ತು. ನಿನ್ನೆಯಷ್ಟೇ ಮುಗಿಯಿತು. ಹೀಗಾಗಿ ನಾನು ಇಂದು ಬಂದಿದ್ದೇನೆ. ಮೀನುಗಾರರನ್ನು ಹುಡುಕೋದು ನನ್ನ ಕೆಲಸವಲ್ಲ, ಅದಕ್ಕೆ ಅಧಿಕಾರಿಗಳು ಪೊಲೀಸರಿದ್ದಾರೆ. ನನಗೆ ಬೇರೆ ಕೆಲಸವಿದೆ ಎಂದ ಸಚಿವ ವೆಂಕಟರಾವ್ ನಾಡಗೌಡರ ಮಾತು ಮೀನುಗಾರರ ಆಕ್ಷೇಪಕ್ಕೆ ಕಾರಣವಾಯಿತು.
ನೀವು ಮೀನುಗಾರಿಕಾ ಸಚಿವರಾಗಿ ಘಟನೆ ನಡೆದು 25 ದಿನಗಳ ನಂತರ ಬರೋದಾ? ನಿಮಗೆ ಜವಾಬ್ದಾರಿ ಇಲ್ವಾ? ಎಂದು ಪ್ರಶ್ನಿಸಿದ ಮೀನುಗಾರರೊಬ್ಬರಿಗೆ "ಆಯ್ತು ಗುರುಗಳೇ" ಎಂದು ಸಮಜಾಯಿಸಿ ನೀಡಲೆತ್ನಿಸಿದರು.
ಬಳಿಕ ಸಚಿವರನ್ನು ಸುತ್ತುವರಿದ ಮೀನುಗಾರ ಮಹಿಳೆಯರು ಹಾಗೂ ನಾಪತ್ತೆಯಾದ ಮೀನುಗಾರ ಕುಟುಂಬಸ್ಥರು, ರೈತರಂತೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಟೈಮ್ ಅಯಿತು ಎಂದು ಹೋಗುತ್ತಿದ್ದೀರಾ? ಅಷ್ಟು ಅರ್ಜೆಂಟಿದ್ರೆ ನಿಮಗೆ ಇಲ್ಲಿಗೆ ಬಂದಿರೋದು ಯಾಕೆ ಎಂದು ತೀಕ್ಷ್ಮ ಪ್ರಶ್ನೆಗಳ ಸುರಿಮಳೆಗೈದರು. ನಿಮ್ಮ 1 ಲಕ್ಷ ರೂಪಾಯಿ ನಮಗೆ ಪರಿಹಾರ ರೂಪದಲ್ಲಿ ಬೇಕಿಲ್ಲ..ಕಾಡಿ ಬೇಡಿಯಾದರೂ ಊಟ ಮಾಡುತ್ತೇವೆ ನಿಮ್ಮ ಪರಿಹಾರ ಬೇಕಿಲ್ಲ ನಾವೇ 5 ಲಕ್ಷ ಕೊಡುತ್ತೇವೆ, ದನ ಕೊಂದವನಿಗೆ ನೀವು 10 ಲಕ್ಷ ಪರಿಹಾರ ಕೊಟಿಲ್ವಾ ಎಂದಾಗ ಸಚಿವರು ಸುಮ್ಮನಿದ್ದು ಮೆಲ್ಲಗೆ ಅಲ್ಲಿಂದ ತೆರಳಿದರು.