ಕುಂದಾಪುರ,ಜ 10 (MSP): ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವ್ಯಾಪಕಗೊಳ್ಳುತ್ತಿರುವಂತೆಯೇ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಕೆಪಿಸಿ ಕಾಲೋನಿಯಲ್ಲಿ ಬುಧವಾರ ಎರಡು ಮಂಗಗಳು ಮೃತಪಟ್ಟಿವೆ. ಇದರ ಪರಿಣಾಮ ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಮಂಗನ ಕಾಯಿಲೆಯ ಭೀತಿ ಆವರಿಸಿದೆ.
ಹೊಸಂಗಡಿ ಕೆಪಿಸಿ ವಸತಿ ಕಾಲೋನಿಯಲ್ಲಿ ಸುಮಾರು 6 ವರ್ಷ ಪ್ರಾಯದ ಎರಡು ಗಂಡು ಮಂಗಗಳು ಬುಧವಾರ ಬೆಳಗ್ಗೆ ಎರಡು ಮಂಗಗಳು ಮೃತ ಪಟ್ಟಿದೆ. ಇವುಗಳು ಜೊಲ್ಲು ಸುರಿಸಿಕೊಂಡು, ಒದ್ದಾಡಿ ಮೃತಪಟ್ಟಿವೆ. ಬೆಳಗ್ಗೆ ಒಂದು ಮೃತಪಟ್ಟರೆ, ಅಪರಾಹ್ನ ಮತ್ತೊಂದು ಕೋತಿ ಮೃತಪಟ್ಟಿದೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಹೊಸಂಗಡಿ ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಕೂಡಲೆ ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರಣ್ಯ ಇಲಾಖೆಗೆ ತಿಳಿಸಿದ್ದಾರೆ. ಇಲಾಖೆಯವರು ಘಟನ ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿ, ಮಂಗನನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಅನಂತರ ಅದನ್ನು ಸುಟ್ಟು ದಫನ ಮಾಡಲಾಯಿತು. ಸತ್ತ ಮಂಗನ ಶ್ಯಾಂಪಲ್ನ್ನು ಪ್ರಯೋಗಕ್ಕಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಘಟನ ಸ್ಥಳಕ್ಕೆ ಹೊಸಂಗಡಿ ಗ್ರಾ. ಪಂ. ಅಧ್ಯಕ್ಷೆ ಯಶೋಧ ಶೆಟ್ಟಿ, ಉಪಾಧ್ಯಕ್ಷ ಶ್ರೀಧರ್, ಅಭಿವೃದ್ಧಿ ಅಽಕಾರಿ ಗಿರೀಶ್ಕುಮಾರ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಶೆಟ್ಟಿ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೋಷಣ, ಶಂಕರನಾರಾಯಣ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ದಿನಕರ ಶೆಟ್ಟಿ, ಕೆಪಿಸಿ ಇಲಾಖೆಯ ಆರೋಗ್ಯಾಧಿಕಾರಿ ಡಾ| ವಿಜಯಲಕ್ಷ್ಮೀ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದೀಕ್ಷಾ ಎನ್, ಹಿರಿಯ ಆರೋಗ್ಯ ಸಹಾಯಕ ಶಿವಕುಮಾರ್ ಮತ್ತು ಸಿಬಂದಿಗಳು, ಅರಣ್ಯಾಧಿಕಾರಿಗಳಾದ ರವಿಕುಮಾರ್, ಆನಂದ ಬಳೆಗಾರ, ಅರಣ್ಯ ವೀಕ್ಷಕ ಕೃಷ್ಣಮೂರ್ತಿ ಹೆಬ್ಬಾರ್ ಮೊದಲಾದವರು ಭೇಟಿ ನೀಡಿ, ಪರಿಶಿಲನೆ ನಡೆಸಿದರು.