ನವದೆಹಲಿ,ಜ 10 (MSP): ದೇಶವೇ ಬೆಚ್ಚಿ ಬಿದ್ದಿದ್ದ ಉತ್ತರ ಪ್ರದೇಶದ ಬುಲಂದ್ಶಹರ್ ಗಲಭೆಯಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದ ಪ್ರಮುಖ ಆರೋಪಿಯಲ್ಲಿ ಒಬ್ಬನಾಗಿರುವ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್ ಅಗರ್ವಾಲ್ ಎಂಬಾತನನ್ನು ಪೊಲೀಸರು ಉತ್ತರ ಪ್ರದೇಶದ ಹಾಪುರ್ ನಲ್ಲಿ ಗುರುವಾರ ಮುಂಜಾನೆ ಬಂಧಿಸಿದ್ದಾರೆ.
ಗೋಹತ್ಯೆಗೆ ಸಂಬಂಧಿಸಿ ಬುಲಂದ್ಶಹರ್ನಲ್ಲಿ ಕಳೆದ ವರ್ಷ ಡಿ.3ರಂದು ಭುಗಿಲೆದ್ದಿದ್ದ ಹಿಂಸೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಮತ್ತು ಸುಮಿತ್ ಕುಮಾರ್ ಎಂಬ ತರುಣನನ್ನು ಜನಸಮೂಹ ಚಚ್ಚಿ ಕೊಂದಿತ್ತು. ಇದಕ್ಕೆ ಶಿಖರ್ ಅಗರ್ವಾಲ್ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ. ಅಂದರೆ ಈತ ಘಟನೆ ನಡೆಯುವ ಕೆಲವು ದಿನಗಳ ಮುಂಚೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಅದರಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ನಿಂದಿಸಿದ್ದರು ಎಂದು ತಿಳಿದುಬಂದಿದೆ.
ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್ ಅಗರ್ವಾಲ್ ನನ್ನು ಇಂದು ಮುಂಜಾನೆ ಬಂಧಿಸಲಾಗಿದ್ದು ಆತನನ್ನು ವಿಚಾರಣೆಗೊಳಪಡಿಸಿ ಬಳಿಕ ಜ.೧೦ ರ ಗುರುವಾರ ಸಂಜೆಯ ವೇಳೆಗೆ ಕೋರ್ಟಿನಲ್ಲಿ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ (ಬುಲಂದ್ಶಹರ್ ನಗರ) ಅತುಲ್ ಕುಮಾರ್ ಶ್ರೀವಾಸ್ತವ ಮಾದ್ಯಮಗಳಿಗೆ ತಿಳಿಸಿದ್ದಾರೆ.