ಸಿದ್ದಾಪುರ, ಜ 10(SM): ಕುಂದಾಪುರ ತಾಲೂಕಿನ ಹೊಸಂಗಡಿ ಕೆಪಿಸಿ ವಸತಿ ಕಾಲೋನಿಯಲ್ಲಿ ಬುಧವಾರ ಮೃತಪಟ್ಟ ಮತ್ತೊಂದು ಮಂಗನ ಮರಣೋತ್ತರ ಪರೀಕ್ಷೆಯನ್ನು ಗುರುವಾರದಂದು ಉಡುಪಿ ಜಿಲ್ಲಾ ಆರೋಗ್ಯ ತಂಡದ ಸಮುಖದಲ್ಲಿ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮತ್ತೆ ವ್ಯಾಪಿಸುತ್ತಿರುವ ಮಂಗನ ಕಾಯಿಲೆ ಇದೀಗ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಉಡುಪಿ ಜಿಲ್ಲೆಗೂ ವ್ಯಾಪಿಸುವ ಭೀತಿ ಎದುರಾಗಿದೆ.
ಕೆಪಿಸಿ ವಸತಿ ಕಾಲೋನಿಯಲ್ಲಿ ಬುಧವಾರ ಸುಮಾರು 6 ವರ್ಷ ಪ್ರಾಯದ ಎರಡು ಗಂಡು ಮಂಗಗಳು ಒದ್ದಾಡಿ ಮೃತಪಟ್ಟಿವೆ. ಬೆಳಗ್ಗೆ ಮೃತಪಟ್ಟ ಒಂದು ಮಂಗವನ್ನು ಬುಧವಾರವೇ ಮರಣೋತ್ತರ ಪರೀಕ್ಷೆ ನಡೆಸಲಾಗಿತು. ಮಧ್ಯಾಹ್ನ ಮತ್ತೊಂದು ಮಂಗ ಮೃತ ಪಟ್ಟಿದರಿಂದ ಗುರುವಾರದಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ಸಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಅನಂತರ ಅದನ್ನು ಸುಡಲಾಯಿತು. ಸತ್ತ ಮಂಗನ ಶ್ಯಾಂಪಲ್ನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಂಗಗಳ ಸ್ಯಾಂಪಲಗಳನ್ನು ಶಿವಮೊಗ್ಗದಲ್ಲಿರುವ ವಿಡಿಎಲ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಅವುಗಳ ಸಾವಿನ ನಿಜವಾದ ಕಾರಣಗಳನ್ನು ತಿಳಿಯಬಹುದಾಗಿದೆ ಎಂದು ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರೋಹಿಣಿ ಅವರು ತಿಳಿಸಿದರು.
ಘಟನ ಸ್ಥಳಕ್ಕೆ ಉಡುಪಿ ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ ಭಟ್, ಕಿಟಾ ಶಾಸ್ತ್ರಜ್ಞಾರಾದ ಮುಕ್ತ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ, ಶಂಕರನಾರಾಯಣ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ದಿನಕರ ಶೆಟ್ಟಿ ಮೊದಲಾದವರು ಭೇಟಿ ನೀಡಿ, ಪರಿಶಿಲನೆ ನಡೆಸಿದ್ದಾರೆ.