ಕುಂಬಳೆ, ಜ 10(SM): ಕುಂಬಳೆಯಿಂದ ಒಂದು ತಿಂಗಳ ಹಿಂದೆ ನಾಪತ್ತೆಯಾದ ಯುವತಿಯನ್ನು ಅಸ್ಸಾಂನಲ್ಲಿ ಉಗ್ರಗಾಮಿಗಳ ಕೇಂದ್ರದ ಸಮೀಪದಿಂದ ಪತ್ತೆ ಹಚ್ಚಲಾಗಿದೆ. ಇದೇ ವೇಳೆ ಯುವತಿಯ ಜತೆ ವಾಸಿಸುತ್ತಿದ್ದ ಯುವಕ ಪೊಲೀಸರನ್ನು ಕಂಡು ಪರಾರಿಯಾಗಿದ್ದಾನೆ.
ಕುಂಬಳೆ ಪೇರಾಲ್ ನ 26 ವರ್ಷದ ಯುವತಿಯನ್ನು ಅಸ್ಸಾಂನ ನೌಗಾವ್ ಜಿಲ್ಲೆಯ ರೂಪಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಪಶ್ಚಿಮ ಸಲ್ಪಾರ್ ನ ಉಲ್ಪಾ ಉಗ್ರಗಾಮಿ ಸಂಘಟನೆಯ ಕೇಂದ್ರದ ಪರಿಸರದಿಂದ ಪತ್ತೆಹಚ್ಚಲಾಗಿದೆ.
ಸೈಬರ್ ಸೆಲ್ ನ ಸಹಾಯದಿಂದ ಈಕೆಯನ್ನು ಪತ್ತೆಹಚ್ಚಲಾಗಿದೆ. ಕುಂಬಳೆಯಲ್ಲಿ ಬೇಕರಿಯೊಂದರಲ್ಲಿ ಕೆಲಸಕ್ಕಿದ್ದ ಅಸ್ಸಾ೦ನ ಯುವಕನ ಜೊತೆ ಈಕೆ ಪರಾರಿಯಾಗಿದ್ದಳು. ಯುವಕನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಈಕೆಯ ಮೊಬೈಲ್ ನಂಬ್ರ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಪತ್ತೆಹಚ್ಚಲಾಗಿದ್ದು, ಕುಂಬಳೆ ಪೊಲೀಸರು ಯುವತಿಯನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರು ಪಡಿಸಿ ಬಳಿಕ ಸಂಬಂಧಿಕರ ಜೊತೆ ಕಳುಹಿಸಲಾಗಿದೆ.