ಬೆಂಗಳೂರು, ಜ 11(MSP): ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು ಸಂಭಾವ್ಯರ ಪಟ್ಟಿ ತಯಾರಿಸಿಕೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಎಚ್.ಎನ್ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಸೇರಿದಂತಕೆ ಹಾಲಿ 15 ಸಂಸದರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಡ ದಲ್ಲಿ ಬಿಜೆಪಿ ಸೋತ ಹಿನ್ನಲೆಯಲಿ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ತೀರ್ಮಾನ ಮಾಡಿದೆ. ಇದಲ್ಲದೆ ಇತ್ತೀಚಿನ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಬಿಜೆಪಿ ಇಟ್ಟ ಹೆಜ್ಜೆ ಎಡವಂತೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಕಾರಣಗಳಿಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಳೆದು ತೂಗಿ ಮಾಡುವುದು ನಿಶ್ಚಿತವಾಗಿದೆ.
ಎಂ. ಮಲ್ಲಿಕಾರ್ಜುನ ಖರ್ಗೆ ವಿರುದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಎಚ್.ಎನ್ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಇವರಲ್ಲದೆ ಇನ್ನೂ 15 ಮಂದಿ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರು ಉತ್ತರಿಂದ ಡಿ,ವಿ ಸದಾನಂದಗೌಡ , ಹಾಸನದಿಂದ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಮತ್ತು ಮಾಜಿ ಸಚಿವ ಆರ್. ವಿಜಯ ಶಂಕರ್, ಬೆಂಗಳೂರು ಗ್ರಾಮಾಂತರದಲ್ಲಿ ಆರ್. ಅಶೋಕ್ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.