ಮಂಗಳೂರು,ಜ 11(MSP):ಅರಬ್ಬಿ ಸಮುದ್ರದ ಬೋರ್ಗರೆತದ ಶಬ್ದ ಕೇಳಿಸುವ ಅಣತಿ ದೂರದಲ್ಲಿಯೇ ಪ್ರಶಾಂತವಾಗಿ ಹರಿಯುವ ನದಿ. ನೈಸರ್ಗಿಕ ಜಲಸಿರಿಯನ್ನು ಪ್ರವಾಸೋದ್ಯಮಕ್ಕೆ ಬಳಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆರೆದಿಡಲು ಮುಂದಾಗಿರುವ "ನದಿಯ ಉತ್ಸವ" ಹೊಸ ಅವಕಾಶವನ್ನೇ ತೆರೆದಿಡಲಿದೆ.
ನಾಳೆಯಿಂದ ಅಂದರೆ ಜನವರಿ 12 ಮತ್ತು 13ರಂದು ನಡೆಯುವ ಮಂಗಳೂರು ರಿವರ್ ಫೆಸ್ಟ್ ನದಿ ಉತ್ಸವಕ್ಕೆ ಕೊನೆಯ ಹಂತದ ತಯಾರಿಗಳು ಭರದಿಂದ ನಡೆಯುತ್ತಿದ್ದು ಪ್ರವಾಸಿಗರನ್ನು ಸ್ವಾಗತಿಸಲು ಫಲ್ಗುಣಿ ನದಿ ಸಿದ್ದವಾಗಿ ನಿಂತಿದೆ. ನಗರದ ಹೊರವಲಯ ಸುಲ್ತಾನ್ ಬತ್ತೇರಿ, ಬೆಂಗ್ರೆ ಕೂಳೂರಿನ ಫಲ್ಗುಣಿ ನದಿ ದಂಡೆಯಲ್ಲಿ ಎರಡು ದಿನಗಳ ಕಾಲ ರಿವರ್ ಫೆಸ್ಟಿವಲ್ ನಡೆಯಲಿದ್ದು, ಈ ಉತ್ಸವದ ಯಶಸ್ವಿಗಾಗಿ ಜಿಲ್ಲಾಡಳಿತ ಶ್ರಮಿಸುತ್ತಿದೆ.
ನದಿ ಉತ್ಸವದಲ್ಲಿ ಏನಿದೆ ?
ಕೂಳೂರು, ಬೆಂಗ್ರೆ ಕೂಳೂರು, ಸುಲ್ತಾನ್ ಬತ್ತೇರಿಯಲ್ಲಿ ಜಲ ಸಾಹಸ ಕ್ರೀಡೆಗಳಾದ ಸರ್ಫಿಂಗ್, ರೋಯಿಂಗ್, ಕಯಾಕ್, ಸ್ಟ್ಯಾಂಡ್ ಆಪ್ ಪೆಡಲಿಂಗ್ , ವಿಂಡ್ ಸರ್ಫಿಂಗ್, ಜೆಟ್ಸಕೀ, ಸ್ವೀಡ್ ಬೋಟ್ಗಳನ್ನು ನಡೆಯಲಿದೆ
ಇದಲ್ಲದೆ ನದಿಯಲ್ಲಿಯೇ ತೇಲುವ ಆಹಾರ ಮಳಿಗೆಯಲ್ಲಿ ಕರಾವಳಿಯ ವಿಶಿಷ್ಟ ಆಹಾರವನ್ನು ಸವಿಯಬಹುದು. ಇನ್ನು ನದಿ ಪ್ರಕೃತಿ ಸಂರಕ್ಷಣೆಯ ಕುರಿತ ಚಲನಚಿತ್ರೋತ್ಸವ ಒಪನ್ ಗ್ರೌಂಡ್ನಲ್ಲಿ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಆರಂಭವಾಗುವ ಕಾರ್ಯಕ್ರಮ ರಾತ್ರಿ ೮ ರವರೆಗೆ ನಡೆಯಲಿದೆ.
ನೆನಪಿಡಿ ಸೈಕಲ್ ಇದ್ರೆ ಓಕೆ- ವಾಹನಕ್ಕೆ ಪ್ರವೇಶವಿಲ್ಲ
ಕಾರ್ಯಕ್ರಮ ನಡೆಯುವ ಪ್ರದೇಶವು ಕೂಳೂರಿನಿಂದ 3 ಕಿ.ಮಿ ದೂರದಲ್ಲಿದೆ ಹೀಗಾಗಿ ಸಾರ್ವಜನಿಕ ವಾಹನಗಳಿಗೆ ಪ್ರವೇಶವಿಲ್ಲ.ಆದರೆ ಸೈಕಲ್ ಅಥವಾ ಕಾಲುದಾರಿಯಲ್ಲಿ ಪ್ರವೇಶಿಸಬಹುದು. ಕೂಳೂರು, ತಣ್ಣೀರುಬಾವಿ, ಸುಲ್ತಾನ್ ಬತ್ತೇರಿಯಿಂದ ಪ್ರಯಾಣಿಕರ ಬೋಟ್ ಗಳು ಸಂಚರಿಸಲಿವೆ.