ಪಂಚಕುಲ, ಜ 11(MSP): ಪತ್ರಕರ್ತ ರಾಮ್ ಚಂದರ್ ಛತ್ತರ್ಪತಿ ಹತ್ಯೆ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವರು ಅಪರಾದಿ ಎಂದು ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇಂದು ಶುಕ್ರವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿದೆ.
ಪತ್ರಕರ್ತ ಛತ್ತರ್ಪತಿಯನ್ನು 2002ರ ಅಕ್ಟೋಬರ್ನಲ್ಲಿ ಕೊಲೆಗೈಯಲಾಗಿತ್ತು. ಇವರು ಇದೇ ವರ್ಷ ಪೂರಾ ಸಚ್ಚ ಎಂಬ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದು, ಅದರಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್ ಸಿರ್ಸಾದ ಡೇರಾ ಪ್ರಧಾನ ಕಚೇರಿಯಲ್ಲಿ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಕ್ಟೋಬರ್ ನಲ್ಲಿ ಛತ್ರಪತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 2003ರಲ್ಲಿ ಕೊಲೆ ಕೇಸು ದಾಖಲಾಗಿತ್ತು. 2006ರಲ್ಲಿ ಸಿಬಿಐಗೆ ಈ ಕೇಸು ಹಸ್ತಾಂತರವಾಗಿತ್ತು.
ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದರಿಂದ ಪಂಚಕುಲ ಸಿಬಿಐನ ವಿಶೇಷ ಕೋರ್ಟ್ ಗುರ್ಮಿತ್ , ನಿರ್ಮಲ್ ಸಿಂಗ್, ಕುಲದೀಪ್ ಸಿಂಗ್ ಮತ್ತು ಕೃಷನ್ ಲಾಲ್ ಈ ನಾಲ್ವರನ್ನು ’ಅಪರಾಧಿಗಳು’ ಎಂದು ತೀರ್ಪು ನೀಡಿದ್ದು, ಕೊಲೆ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಜನವರಿ 17ರ ಗುರುವಾರದಂದು ಪ್ರಕಟಿಸಿಲಾಗುವುದೆಂದು ಕೋರ್ಟ್ ತಿಳಿಸಿದೆ.
51ರ ಹರೆಯದ ಸ್ವಘೋಷಿತ ದೇವಮಾನವ ಗುರ್ಮೀತ್ ಸಿಂಗ್ ಸಾಧ್ವಿಗಳ ಅತ್ಯಾಚಾರಕ್ಕೆ ಸಂಬಂಧಿಸಿದ ಕೇಸಿನಲ್ಲಿ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.