ಕುಂದಾಪುರ,ಜ 11(MSP): ಇಲ್ಲಿಗೆ ಸಮೀಪದ ಕಂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಶಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ವಾಸನೆ ಬೀರುತ್ತಿದ್ದ ಮಂಗನ ಕಳೆಬರವೊಂದು ಪತ್ತೆಯಾಗಿದೆ.
ಸ್ಥಳೀಯ ನಿವಾಸಿ ಫ್ರಾಂಕ್ಲಿನ್ ಡೇಸಾ ಎನ್ನುವವರ ಕಾಡಿನಲ್ಲಿ ಮಂಗನ ಕಳೆಬರವನ್ನು ನೋಡಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಅಗತ್ಯ ಕ್ರಮಕ್ಕಾಗಿ ಮನವಿ ಮಾಡಲಾಗಿತ್ತು.
ಸ್ಥಳಕ್ಕೆ ಬಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲತಾ ನಾಯ್ಕ್ ಹಾಗೂ ನೇರಳಕಟ್ಟೆಯ ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಕೊಳೆತ ಕಳೆಬರವನ್ನು ಸುಟ್ಟು ಹಾಕಿ ಹಾಗೂ 50 ಮೀಟರ್ ವ್ಯಾಪ್ತಿಯಲ್ಲಿ ಮೇಲೋತೈಯನ್ ಪುಡಿಯನ್ನು ಸಿಂಪಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಈ ಕುರಿತು ಡಾ.ನಾಗಭೂಷಣ್ ಉಡುಪ ಅವರು ಮರಾಶೆಯಲ್ಲಿ ಕಂಡು ಬಂದಿರುವ ಮಂಗನ ಕಳೆಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ವಿಧಿ ವಿಜ್ಞಾನ ಪರೀಕ್ಷೆಗಾಗಿ ಅಂಗಾಂಗಳನ್ನು ರಕ್ಷಿಸಿಡಲು ಸಾಧ್ಯವಾಗದೆ ಇರುವುದರಿಂದ ಮರಣೋತ್ತರ ಶವ ಪರೀಕ್ಷೆ ನಡೆಸದೆ ಕಳೆಬರ ವಿಲೆವಾರಿ ಮಾಡಲಾಗಿದೆ. ಕಂಡ್ಲೂರು ಪರಿಸರದಲ್ಲಿ ಇನ್ನೊಂದು ಮಂಗನ ಶವ ಪತ್ತೆಯಾಗಿರುವ ಮಾಹಿತಿ ಇದ್ದು, ಶನಿವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆತಂಕದಲ್ಲಿ ಸ್ಥಳೀಯರು
ಕಳೆದ ಕೆಲವು ದಿನಗಳಿಂದ ಕುಂದಾಪುರ ಹಾಗೂ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಮಂಗಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಸ್ಥಳೀಯರಲ್ಲಿ ಮಂಗನ ಕಾಯಿಲೆ ಈ ಭಾಗಕ್ಕೂ ಬರಬಹುದು ಎನ್ನುವ ಆತಂಕಗಳನ್ನು ಹೆಚ್ಚಿಸುತ್ತಿದೆ. ಪತ್ತೆಯಾಗಿರುವ ಮಂಗಗಳ ಕಳೆಬರಗಳು ಕೊಳೆತ ಸ್ಥಿತಿಯಲ್ಲಿ ಇದ್ದಾಗ ಸಾವಿನ ನಿಖರ ಕಾರಣ ಪತ್ತೆ ಮಾಡುವುದು ಅಸಾಧ್ಯವಾಗಿರುವುದರಿಂದ ಮಂಗಗಳ ಸಾವಿನ ಕಾರಣಗಳು ಸ್ವಷ್ಟವಾಗುತ್ತಿಲ್ಲ.
ಅಪಘಾತದಿಂದ ಸಾವಿಗೀಡಾಗುವ ಮಂಗಗಳನ್ನು ಹೊರತು ಪಡಿಸಿ ಉಳಿದಂತೆ ಸಾವಿಗೀಡಾಗುವ ಮಂಗಗಳ ಕಳೆಬರಗಳು ಪತ್ತೆಯಾದಾಗ ಸ್ಥಳಕ್ಕೆ ತೆರಳಿ ಸೂಕ್ತ ಪರಿಹಾರೋಪಾಯಗಳನ್ನು
ಕಂಡುಕೊಳ್ಳಬೇಕಾಗದ ಅನೀವಾರ್ಯತೆ ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬಂದೊದಗಿದೆ.
ಕೊಲ್ಲೂರು ಸಮೀಪದ ಹಾಲ್ಕಲ್ ಎಂಬಲ್ಲಿ ಶುಕ್ರವಾರ ವಾಹನಕ್ಕೆ ಸಿಲುಕಿ ಒಂದು ಮಂಗ ಮೃತ ಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.