ಮಂಗಳೂರು,ಜ೧೨(SM):ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಫಲ್ಗುಣಿ ನದಿ ತಟದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಮಂಗಳೂರು ನದಿ ಉತ್ಸವ’ಕ್ಕೆ ಕೂಳೂರು ಸೇತುವೆ ಜಟ್ಟಿ ಬಳಿಯಲ್ಲಿ ಇಂದು ಬೆಳಗ್ಗೆ ಚಾಲನೆ ದೊರೆಯಿತು.
ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನದಿ ಉತ್ಸವಕ್ಕೆ ಡೋಲು ಬಡಿಯುವ ಮೂಲಕ ಚಾಲನೆ ನೀಡಿದರು. ಪಂಚವಾದ್ಯ ನಗಾರಿ, ವಾದ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಮಾತನಾಡಿದ ಸಚಿವ ಯು.ಟಿ ಖಾದರ್, ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ನದಿ ಉತ್ಸವವನ್ನು ಆಯೋಜಿಸಿದ್ದು, ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನದಿ ಕಿನಾರೆಗಳನ್ನು ಗೋವಾ, ಕೇರಳ ಸರಕಾರ ಅತ್ಯುತ್ತಮವಾಗಿ ಉಪಯೋಗಿಸುತ್ತಿದ್ದು ಕರಾವಳಿಯಲ್ಲೂ ಈ ಉತ್ಸವ ಹೆಚ್ಚು ಹೆಚ್ಚು ನಡೆಯಬೇಕು. ಪ್ರತಿಯೊಂದು ಸಂಘಟನೆಯೂ ಕೂಡ ನದಿ ಉತ್ಸವವನ್ನು ಆಯೋಜಿಸಲು ಮುಂದಾಗಬೇಕು. ಇದರಿಂದ ನಮ್ಮ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿ ಸಾಧ್ಯ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಭಾಸ್ಕರ್ ಕೆ., ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.