ಕುಂದಾಪುರ, ಜ 13(MSP): ಮೂಕಾಂಬಿಕ ಅಭಯಾರಣ್ಯದ ಮಾದಿಬರೆ ಮೀಸಲು ಅರಣ್ಯದಲ್ಲಿ ನಡೆದಿದ್ದ ಕಾಡುಕೋಣ ಹತ್ಯೆ ಪ್ರಕರಣದ ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯ ದೋಷಮುಕ್ತಿಗೊಳಿಸಿದೆ. ಮುದೂರಿನ ಕೊಟ್ಟತ್ತಲ್ ಬೇಬಿ, ಶಿಬು, ಜೋಬೀ, ಜಡ್ಕಲ್ನ ಅನಿಲ್ ಹಾಗೂ ಕೊಲ್ಲೂರಿನ ಬೆಬಿ ದೋಷಮುಕ್ತಗೊಂಡಿರುವ ಆರೋಪಿಗಳು.
ಮಾದಿಬರೆ ಮೀಸಲು ಅರಣ್ಯದಲ್ಲಿ ಆರೋಪಿಗಳು ಅಕ್ರಮ ಬಂದೂಕು ಬಳಸಿ ಬಲಿಷ್ಟವಾಗಿದ್ದ ಕಾಡುಕೋಣವೊಂದನ್ನು ಹತ್ಯೆ ಮಾಡಿದ್ದರು ಎಂಬುದಾಗಿ ಆಗಿನ ಕೊಲ್ಲೂರು ಠಾಣಾಧಿಕಾರಿ ಸಂಪತ್ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ಸಂದರ್ಭ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಬಂದೂಕು ತಜ್ಞ ಎನ್.ಜೆ.ಪ್ರಭಾಕರ ಇವರು ನ್ಯಾಯಾಲಯದಲ್ಲಿ ಹಾಜರಾಗಿ ಪತ್ತೆಯಾದ ಆಯುಧವನ್ನು ಬಂದೂಕು ಎಂದು ದೃಢೀಕರಿಸಿದ್ದರು. ಅದೇ ರೀತಿ ಪಶುವೈದ್ಯ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ವಿಧಿ ವಿಜ್ಞಾನ ತಜ್ಞೆ ಡಾ. ಗೀತಾಲಕ್ಷ್ಮೀ ಮೃತವಾದ ಪ್ರಾಣಿಯನ್ನು ಕಾಡುಕೋಣ ಎಂದು ದೃಢೀಕರಿಸಿದ್ದರು. ಒಟ್ಟು 12 ಜನ ಸಾಕ್ಷ್ಯ ನುಡಿದಿದ್ದರು. ಆದರೆ ಆರೋಪಿಗಳೆ ಕೃತ್ಯ ನಡೆಸಿದ್ದಾರೆ ಎನ್ನವುದಕ್ಕೆ ಪೂರಕ ಸಾಕ್ಷ್ಯಗಳಿಲ್ಲ ಎಂಬುದಾಗಿ ಕುಂದಾಪುರದ ಎರಡನೇ ಹೆಚ್ಚುವರಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪಿತ್ತಿದ್ದಾರೆ. ಆರೋಪಿಗಳ ಪರವಾಗಿ ಕುಂದಾಪುರದ ಖ್ಯಾತ ಕ್ರಿಮಿನಲ್ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.