ನವದೆಹಲಿ,ಜ 13(MSP):ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಗಳನ್ನು ಅಪಹರಿಸುವುದಾಗಿ ದುಷ್ಕರ್ಮಿಗಳು ಮುಖ್ಯಮಂತ್ರಿ ಕಚೇರಿಗೆ ಇ–ಮೇಲ್ ಬೆದರಿಕೆ ಒಡ್ಡಿದ್ದು ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಕೇಜ್ರಿವಾಲ್ ಪುತ್ರಿಗೆ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ಅಪರಿಚಿತ ವ್ಯಕ್ತಿಯ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ.
ನಿಮ್ಮ ಪುತ್ರಿಯನ್ನು ಅಪಹರಿಸುತ್ತೇನೆ. ಆಕೆಯನ್ನು ರಕ್ಷಿಸಲು ನೀವು ಏನು ಮಾಡುವಿರಿ ? ಎಂಬ ಬೆದರಿಕೆ ಇ–ಮೇಲ್ ಬಂದಿರುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೇಜ್ರಿವಾಲ್ ಪುತ್ರಿ ಗುರುಗ್ರಾಮದಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಹರಣದ ಬಗ್ಗೆ ಮುಖ್ಯಂತ್ರಿ ಕಚೇರಿಗೆ ಮೂರು ಇ–ಮೇಲ್ಗಳು ಬಂದಿದೆ. ಈ ಮೂರು ಇಮೇಲ್ಗಳು ಜನವರಿ 9ರಂದು ಬಂದಿದ್ದು ಅವುಗಳನ್ನು ದೆಹಲಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಘಟನೆ ಬಳಿಕ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಕಟ್ಟೆಚ್ಚರ ವಹಿಸಿದ್ದಾರೆ.