ಮಂಗಳೂರು, ಜ 13(SM): ನಗರ ಹಾಗೂ ಇತರ ಜಿಲ್ಲೆಗಳಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಆರೋಪಿಗಳಿಂದ 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ ರಸ್ತೆಯ ಸುಲಬ್ ಶೌಚಾಲಯದ ಬಳಿಯಲ್ಲಿ ನಂಬರ್ ಪ್ಲೇಟ್ ಅಳವಡಿಸದೇ ದ್ವಿಚಕ್ರ ವಾಹನಗಳೊಂದಿಗೆ ಅನುಮಾನಸ್ಪದ ರೀತಿಯಲ್ಲಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಹಾಗೂ ಬೆಂಗ್ರೆ ಕಸಬಾ ಸಯ್ಯದ್ ಅಫ್ರಿದ್(19), ಮೊಹಮ್ಮದ್ ಸಫ್ವಾನ್ (19) ಹಾಗೂ ಮೊಹಮ್ಮದ್ ಗೌಸ್(20) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವುಗೈದ ಒಟ್ಟು ೫ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.
2018 ನೇ ಆಗಸ್ಟ್ ತಿಂಗಳಲ್ಲಿ ಮಂಗಳೂರು ನಗರದ ಜೋಡುಮಠ ರಸ್ತೆಯ ಯುನೈಟೆಡ್ ಫ್ಲಾಝಾ ಪಾರ್ಕಿಂಗ್ ಸ್ಥಳದಿಂದ ಕಳವುಗೈದ ಸುಝುಕಿ ಅಕ್ಸಸ್ ಸ್ಕೂಟರ್, 2018 ನೇ ಸೆಪ್ಟೆಂಬರ್ ತಿಂಗಳಲ್ಲಿ ಮಂಗಳೂರು ನಗರದ ದಕ್ಷಿಣ ಧಕ್ಕೆಯ ಬಳಿಯಲ್ಲಿ ಪಾರ್ಕ್ ಮಾಡಿದ ಹೀರೋ ಹೊಂಡಾ ಸ್ಲೆಂಡರ್ ಬೈಕ್, 2016 ನೇ ಇಸವಿಯಲ್ಲಿ ಮಂಗಳೂರು ಓಲ್ಡ್ ಕೇಂಟ್ ರಸ್ತೆಯ ಕಟ್ಟಡವೊಂದರ ಬಳಿಯಲ್ಲಿ ಪಾರ್ಕ್ ಮಾಡಿದ ಯಮಹಾ ಎಫ್ ಝೆಡ್ ಬೈಕ್, 2018 ನೇ ಇಸವಿಯಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳವುಗೈದ ಹೀರೋ ಹೊಂಡಾ ಸಿಡಿ100 ಬೈಕ್, 2018 ನೇ ಆಗಸ್ಟ್ ತಿಂಗಳಲ್ಲಿ ಹಾಸನ ಜಿಲ್ಲೆಯ ಪೆನ್ಶನ್ ಮೊಹಲ್ಲಾ ವ್ಯಾಪ್ತಿಯಿಂದ ಕಳವುಗೈದ ಹೊಂಡಾ ಡಿಯೋ ಸ್ಕೂಟರ್ ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,58,000/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದೆ.