ಕಡಬ, ಜ 14 (MSP): ರಾಷ್ಟ್ರೀಯ ಹೆದ್ದಾರಿ 75ರ ಹಾಸನ- ಗುಂಡ್ಯ- ಬಿ.ಸಿ. ರೋಡ್ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೆಲ್ಯಾಡಿಯಿಂದ ಬಿ.ಸಿ. ರೋಡ್ವರೆಗೆ 42 ಕಿ.ಮೀಗಳ ಬೃಹತ್ ಪಾದಯಾತ್ರೆಗೆ ಜ.14 ರ ಸೋಮವಾರ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಚಿವರು 'ಹೆದ್ದಾರಿ ಕಾಮಗಾರಿ ಸ್ಥಗಿತ ಜಿಲ್ಲೆಯ ಬಹುದೊಡ್ದ ಸಮಸ್ಯೆಯಾಗಿದೆ ಕಾಮಗಾರಿ ಮುಗಿಸದಿದ್ದರೆ ಮಳೆಗಾಲದಲ್ಲಿ ಪ್ರಾಣ ಹಾನಿಯಾಗುವ ಅಪಾಯ ಇದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ' ಘೋಷಣೆಯೊಂದಿಗೆ ಈ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದ್ದೇವೆ ಎಂದರು.
ಇದಕ್ಕೂ ಮೊದಲು ನೆಲ್ಯಾಡಿ ಬಸ್ ತಂಗುದಾಣದ ಬಳಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಜಿ ಸಚಿವ ರಮಾನಾಥ ರೈ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್ ಲೋಬೋ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಈ ಪಾದಯಾತ್ರೆಗೆ ಇಂದು ಸಂಜೆ 4.30ಕ್ಕೆ ಉಪ್ಪಿನಂಗಡಿ ತಲುಪಿದೆ ನಂತರ ಅಲ್ಲಿಯೂ ಪ್ರತಿಭಟನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಶಾಸಕರಾದ ವಸಂತ ಬಂಗೇರ, ಎಚ್.ಎಂ. ವಿಶ್ವನಾಥ್, ಜೆ.ಆರ್. ಲೋಬೊ, ಕೇರಳ ಪಿಸಿಸಿ ವಕ್ತಾರ ಹರೀಶ್ ಬಾಬು ಭಾಗವಹಿಸಲಿದ್ದಾರೆ ಎಂದರು. ಜ. 15ರಂದು ಉಪ್ಪಿನಂಗಡಿಯಿಂದ ಹೊರಟು ಸಂಜೆ ಮಾಣಿ ಜಂಕ್ಷನ್ ತಲುಪಿ ಪ್ರತಿಭಟನಾ ಸಭೆ ನಡೆಯಲಿದೆ. ಆ ಬಳಿಕ ಜ. 16ರಂದು ಮಾಣಿಯಿಂದ ಮುಂದುವರಿದು ಸಂಜೆ ಬಿ.ಸಿ. ರೋಡ್ ತಲುಪಲಿದೆ. ಬಸ್ ನಿಲ್ದಾಣದ ಬಳಿ ನಡೆಯುವ ಸಮಾರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾರಾಯಣ ರಾವ್, ಅರುಣ್ ಮಾಚಯ್ಯ, ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ, ಸವಿತಾ ರಮೇಶ್ ಭಾಗವಹಿಸಲಿದ್ದಾರೆ .ಮೂರು ದಿನಗಳಲ್ಲಿ ಒಟ್ಟು 42 ಕಿ.ಮೀ. ಪಾದಯಾತ್ರೆ ಸಂಚರಿಸಲಿದೆ.