ಬೆಂಗಳೂರು, ಜ 14 (MSP): ದೇಶದಲ್ಲಿ ನಿರಂತರವಾಗಿ ದೋಚುವ ಸಂಸ್ಕೃತಿ ನಡೆಯುತ್ತಿದೆ. ಹೆಚ್ಚು ಸಂಪಾದನೆಯುಳ್ಳ ದೇಗುಲಗಳ ಮೇಲೆ ಇವತ್ತಿನ ಮೊಹಮ್ಮದ್ ಘಜ್ನಿಗಳು ಮುಗಿಬೀಳುತ್ತಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್ . ಕುಮಾರ್ ಟೀಕಿಸಿದ್ದಾರೆ.
ಅವರು ಮಿಥಿಕ್ ಸೊಸೈಟಿ ಬೆಂಗಳೂರು ಆಯೋಜಿಸಿದ್ದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಇತಿಹಾಸ ಮತ್ತು ಸಂಸ್ಕೃತಿ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
17 ಬಾರಿ ದಂಡಯಾತ್ರೆ ಬಂದಿದ್ದ ಮೊಹಮ್ಮದ್ ಘಜ್ನಿ ಸೋಮನಾಥ ದೇವಸ್ಥಾನದ ಮೇಲೆ ಸತತ ದಾಳಿ ಮಾಡಿದ್ದ ಕುರಿತು ಇತಿಹಾಸದಲ್ಲಿದೆ. ದೇಶದ ಯಾವ ದೇವಸ್ಥಾನದಲ್ಲಿ ಪೂಜೆ ಚೆನ್ನಾಗಿ ಆಗುತ್ತಿದೆಯೋ, ಹೆಚ್ಚು ಜನ ನಂಬಿಕೆ ಇಟ್ಟು ಹೋಗುತ್ತಾರೋ, ಸಂಪಾದನೆ ಹೆಚ್ಚಾಗಿದೆಯೋ ಆ ಎಲ್ಲಾ ದೇವಾಲಯದ ಮೇಲೆ ಸರ್ಕಾರದ ಕಣ್ಣುಬಿದ್ದಿರುತ್ತದೆ. ಸರ್ಕಾರ ದೇವಸ್ಥಾನದಿಂದ ಹಣ ಪಡೆದು ದೇವಸ್ಥಾನಗಳಿಗೆ ಏನೂ ಮಾಡದೇ ಆ ಹಣದಲ್ಲಿ ಜೀವನ ನಡೆಸುತ್ತಿವೆ. ಇದನ್ನು ನಿಲ್ಲಿಸಲು ಜನಜಾಗೃತಿಯಾಗಬೇಕು ಎಂದರು.
ನಮ್ಮ ಧಾರ್ಮಿಕ ನಂಬಿಕೆ, ಧರ್ಮದ ಮೇಲೆ ದಾಳಿ ನಡೆಸಲಾಗುತ್ತಿದೆ. ನಮ್ಮ ನಂಬಿಕೆಗಳನ್ನು ಮಾನವ ಹಕ್ಕುಗಳ ಮುಖಾಂತರ ನೊಡುವ ಸ್ಥಿತಿ ಬಂದಿದೆ ಎನ್ನುವುದು ವಿಪರ್ಯಾಸ ಎಂದರು.