ಮಂಗಳೂರು, ಜ 14 (MSP): ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಅವರ ಅಭಿಮಾನಿಗಳು, ಯಕ್ಷಗಾನ, ಮದುವೆ ಅಮಂತ್ರಣ ಪತ್ರಿಕೆ , ಯಾಗ- ಹೋಮಗಳ ಪ್ರಾರ್ಥಿಸಿ ಆ ಕುರಿತು ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರದ ಜಾರಿಗೊಳಿಸಿದ ಪ್ರಮುಖ ಯೋಜನೆ ಹಾಗೂ ಅದರ ಪ್ರಯೋಜನ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗತೊಡಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಮೋದಿ ನಾಯಕತ್ವಕ್ಕಾಗಿ ನಗರದಲ್ಲಿಯೂ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.
ಜನವರಿ 20ರಂದು ಮಂಗಳೂರಿನ ಕೋಡಿಯಾಲ್ ಬೈಲ್ ನ ಟಿ.ವಿ ರಾಮನ್ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಈ ಸಮಾವೇಶ ನಡೆಯಲಿದ್ದು, ಮೋದಿ ಸರಕಾರದ ಸಾಧನೆ ಮತ್ತು ಅಭಿವೃದ್ಧಿಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ಹಿನ್ನಲೆಯಲ್ಲಿ ಮಂಗಳೂರಿನ ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಮತ್ತು ಪಂಚಾಯತ್ ತಂಡದ ಜೊತೆ ಸೇರಿ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಎಂಬ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮಾವೇಶ ಆಯೋಜಿಸಲಾಗಿದ್ದು ಇಲ್ಲಿ ಖ್ಯಾತ ಭಾಷಣಕಾರರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಚರ್ಚಿಸಲಿದ್ದಾರೆ. ಇವುಗಳಲ್ಲಿ ಜಿಎಸ್ ಟಿ ಮತ್ತು ನೋಟು ಅಪಮೌಲ್ಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ರಾಜತಾಂತ್ರಿಕ ನಡೆ, ಆಯುಶ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಭಯೋತ್ಪಾದನೆ ವಿರುದ್ಧ ಹೋರಾಟ, ನಕ್ಸಲರು ಮತ್ತು ಎನ್ಜಿಓ ಹಾಗೂ ಕರ್ನಾಟಕದ ಅಭಿವೃದ್ಧಿಯಲ್ಲಿ ಮೋದಿ ಸರಕಾರದ ಪಾತ್ರದ ಬಗ್ಗೆ ಚರ್ಚೆ ನಡೆಯಲಿದೆ.