ಉಡುಪಿ, ಜ 14(SM): ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕುರಿತಂತೆ ಇದುವರೆಗೆ ಯಾವುದೆ ಪ್ರಕರಣ ಪತ್ತೆಯಾಗಿಲ್ಲ ಆದರೂ ಸಹ ಜಿಲ್ಲೆಯಲ್ಲಿ ಈ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಸೋಮವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಡಿನಲ್ಲಿ ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆಯಾಗಿದ್ದು, ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಸತತ ಎಂಟರಿಂದ ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ, ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು, ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತ ಸ್ರಾವವಾಗಬಹುದು, ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು, ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಂಗನ ಕಾಯಿಲೆ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ, ಆರೋಗ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸದಾ ಜಾಗೃತರಾಗಿದ್ದು, ತುರ್ತು ಸಂದರ್ಭದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಮತ್ತು ತಮ್ಮ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸಂಬಂದಪಟ್ಟಂತೆ ಜನರಲ್ಲಿ ಅರಿವು ಮೂಡಿಸಬೇಕು. ಯಾವುದೇ ಅಸ್ವಾಭಾವಿಕ ಮಂಗನ ಸಾವಿನ ಮಾಹಿತಿ ಸಿಕ್ಕ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪಶು ಸಂಗೋಪನಾ ಇಲಾಖೆಯಿಂದ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನೆರವೇರಿಸಿ, ಮಂಗಗಳ ಅಂಗಗಳನ್ನು ವೈರಾಣು ಪರೀಕ್ಷೆಗೆ ಕಳುಹಿಸುವುದು ಮತ್ತು ಕಾಡಿಗೆ ತೆರಳುವ ಸಾಕು ಪ್ರಾಣಿಗಳ ಉಣ್ಣೆಗಳಿಂದ ಈ ರೋಗ ಮನುಷ್ಯರಿಗೆ ಹರಡುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಅರಣ್ಯ ಇಲಾಖೆ ವತಿಯಿಂದ, ಕಾಡಿನ ಎಲ್ಲಾ ಪ್ರವೇಶ ರಸ್ತೆಗಳಲ್ಲಿ ಮಂಗನ ಕಾಯಿಲೆ ಕುರಿತ ಎಚ್ಚರಿಕೆ ಸಂದೇಶ ಅಳವಡಿಸಬೇಕು ಹಾಗೂ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.
ಕಾಡಿನಲ್ಲಿ ಯಾವುದೇ ಮಂಗನ ಅಸ್ವಾಭಾವಿಕ ಸಾವು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ಗ್ರಾಮಗಳಲ್ಲಿ ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಸಭೆಗಳನ್ನು ಕರೆದು ವೈದ್ಯಾಧಿಕಾರಿಗಳ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಮಂಗನ ಕಾಯಿಲೆ ಕುರಿತ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಪೋಸ್ಟರ್ ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಆರೋಗ್ಯ ಇಲಾಖೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗನ ಕಾಯಿಲೆಗೆ ಸಂಬಂದಪಟ್ಟ ಸೂಕ್ತ ಔಷಧಗಳು ಮತ್ತು ಅಗತ್ಯ ಸಲಕರಣೆಗಳನ್ನು ದಾಸ್ತಾನು ಇಡುವಂತೆ, ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲು ಹಾಗೂ ಮಂಗನ ಸಾವು ಸಂಭವಿಸಿದ ಸ್ಥಳದ ಸುತ್ತಲಿನ 50 ಮೀಟರ್ ಪ್ರದೇಶದಲ್ಲಿ ಮೆಲಥಿಯನ್ ಕ್ರಿಮಿನಾಶಕ ಸಿಂಪಡಿಸುವಂತೆ ಹಾಗೂ ಮಂಗನ ಸಾವು ಸಂಭವಿಸಿದ ಸ್ಥಳದಲ್ಲಿ ಪ್ರತಿದಿನ ಜ್ವರ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.