ಕಾಸರಗೋಡು, ಜ 14(SM): ಗಡಿನಾಡ ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕದ ವಿರುದ್ಧ ನಡೆದ ವಿದ್ಯಾರ್ಥಿಗಳ ಹಾಗೂ ಪೋಷಕರ ಹೋರಾಟಕ್ಕೆ ಜಯ ಲಭಿಸಿದೆ. ಶಾಲೆಗಳಿಗೆ ನೇಮಕಗೊಂಡು ಇಂದು ಬೆಳಿಗ್ಗೆ ನೇಮಕಾತಿಯ ಆದೇಶ ಪತ್ರ ಸಹಿತ ಶಿಕ್ಷಕರು ತಲಪಿದರೂ, ವಿದ್ಯಾರ್ಥಿಗಳು ಹಾಗೂ ಪೋಷಕರು ಆವರಣದೊಳಗೆ ಪ್ರವೇಶಿಸಲು ಅನುವು ಕೊಡದೆ ಪ್ರತಿಭಟನೆ ನಡೆಸಿದ್ದರಿಂದ ಹೋರಾಟಕ್ಕೆ ಮಣಿದ ಅಧಿಕಾರಿಗಳು ಕನ್ನಡ ಅರಿಯದ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಿಸದಿರಲು ಹಾಗೂ ಈಗ ನೇಮಕಗೊಂಡಿರುವ ಶಿಕ್ಷಕರನ್ನು ತೆರಳುವಂತೆ ಆದೇಶ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಪೊಲೀಸ್ ಭದ್ರತೆಯಲ್ಲಿ ಕಾಸರಗೋಡಿನ ಬೇಕೂರು ಸರಕಾರಿ ಶಾಲೆಗೆ ತಲಪಿದ ಶಿಕ್ಷಕಿಯನ್ನು ಒಳಪ್ರವೇಶಿಸಲು ಬಿಡದೆ ಸಾರ್ವಜನಿಕರು ತಡೆದರು. ಸ್ಥಳಕ್ಕೆ ತಲುಪಿದ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕ ಗಿರೀಶ್ ಚೋಲಯಿಲ್ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಎನ್. ನಂದಿಕೇಶನ್ ರವರು ಶಾಲಾ ರಕ್ಷಕ ಸಂಘದ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ, ಫರೀದಾ ಝಕೀರ್, ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಕೆ. ಭಾಸ್ಕರ ಮೊದಲಾದವರ ಸಮ್ಮುಖದಲ್ಲಿ ಮಲಯಾಳಿ ಶಿಕ್ಷಕಿ ಜೊತೆ ಮಾತುಕತೆ ನಡೆಸಿ ಒಮ್ಮತಕ್ಕೆ ಬರಲಾಯಿತು.
ಇದರಂತೆ ಶಿಕ್ಷಕಿಗೆ ಕೆಲಸಕ್ಕೆ ಸೇರ್ಪಡೆಗೊಳ್ಳಲು ಅನುಮತಿ ನೀಡಲಾಯಿತು. ಆದರೆ ಕನ್ನಡ ಭಾಷೆ ಕಲಿತ ಮೇಲೆ ಮಾತ್ರ ಮತ್ತೆ ಹಾಜರಾಗುವಂತೆ ಲಿಖಿತ ಹೇಳಿಕೆ ಪಡೆದು ದೀರ್ಘಾವಧಿ ರಜೆಯಲ್ಲಿ ತೆರಳುವಂತೆ ಆದೇಶಿಸಲಾಯಿತು.
ಇನ್ನು ಕಾಯರ್ ಕಟ್ಟೆ ಸರಕಾರಿ ಶಾಲೆಗೆ ಆಗಮಿಸಿದ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇದರಿಂದ ಆದೇಶ ಪತ್ರ ಪಡೆದು ಬಂದ ಶಿಕ್ಷಕನನ್ನು ರಜೆಯಲ್ಲಿ ಕಳುಹಿಸಲಾಯಿತು. ಪೆರಡಾಲ ಶಾಲೆಯಲ್ಲೂ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ಶಿಕ್ಷಕರು ಇಂದು ಆಗಮಿಸಿಲ್ಲ. ಯಾವುದೇ ಕಾರಣಕ್ಕೂ ಮಲಯಾಳ ಶಿಕ್ಷಕರನ್ನು ಶಾಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಕನ್ನಡ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಕೊನೆಗೂ ಕನ್ನಡಿಗರ ಹೋರಾಟಕ್ಕೆ ಜಯ
ಗಡಿನಾಡಿನ ಬೇಕೂರು, ಪೆರಡಾಲ, ಕಾಯರ್ ಕಟ್ಟೆ ಶಾಲಾ ಕನ್ನಡ ಮಾಧ್ಯಮಕ್ಕೆ ಸಯನ್ಸ್ ಪಾಠಕ್ಕೆ ಮಲಯಾಳ ಶಿಕ್ಷಕರ ನೇಮಕದ ಬಗ್ಗೆ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ಕೆಲವು ತಿಂಗಳ ಹಿಂದೆ ಮಂಗಲ್ಪಾಡಿ ಶಾಲೆಯಲ್ಲಿ ಮಲಯಾಳ ಶಿಕ್ಷಕರ ನೇಮಕದ ವಿರುದ್ಧ ಪ್ರತಿಭಟನೆ ನಡೆದಿತ್ತು. ಕೊನೆಗೆ ಶಿಕ್ಷಕರನ್ನು ರಜೆಯಲ್ಲಿ ಕಳುಹಿಸಲಾಗಿತ್ತು. ಈ ಹೋರಾಟವು ಯಶಸ್ವಿ ಕಂಡಿತ್ತು. ಇದೀಗ ಮತ್ತೆ ಮಲಯಾಳ ಶಿಕ್ಷಕರ ನೇಮಕ ಕನ್ನಡಿಗರನ್ನು ಕೆರಳಿಸಿದೆ. ಅಂತೂ ಹೋರಾಟಕ್ಕೆ ಜಯ ಲಭಿಸಿದ್ದು, ಗಡಿನಾಡ ಕಾಸರಗೋಡಿನಲ್ಲಿ ಕನ್ನಡ ಉಳಿಸಲು ಸಂಘಟಿತ ಹೋರಾಟದ ಅನಿವಾರ್ಯತೆ ಇದೆ.