ಉಡುಪಿ, ಜ 15(SM): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ಕಣ್ಮರೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಕೇರಳಕ್ಕೆ ತೆರಳಿದ್ದ ಪೊಲೀಸ್ ಹಾಗೂ ಮೀನುಗಾರರ ತಂಡ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಮರಳಿ ಬಂದಿದೆ.
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಮುದ್ರಕ್ಕೆ ಹೊಂದಿಕೊಂಡಿರುವ ನದಿಗಳಲ್ಲಿ ನಡೆಸಲಾಗುತ್ತಿದ್ದ ಶೋಧ ಕಾರ್ಯವನ್ನೂ ಯಾವುದೇ ಮಾಹಿತಿ ಸಿಗದಿರುವ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರ ಕಣ್ಮರೆಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಆದರೆ ಈವರೆಗೂ ಮೀನುಗಾರರಿಗೆ ಸಂಬಂಧಿಸಿ ಯಾವುದೇ ಸುಳಿವು ಪತ್ತೆಯಾಗಿಲ್ಲ.