ಮಂಗಳೂರು, ಜ 15 (MSP) : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆಗೆ ಸೋಮವಾರ ಬಂದಿದ್ದ ಜಿಎಂಆರ್ ಏರ್ಪೋರ್ಟ್ ಪ್ರೈವೇಟ್ ಕಂಪೆನಿ ಮತ್ತು ನ್ಯಾಷನಲ್ ಇನ್ವೆಸ್ಟ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್ (ಎನ್ಐಐಎಫ್) ಪ್ರತಿನಿಧಿಗಳು ವಿಮಾನ ನಿಲ್ದಾಣದ ನೌಕರರ ಪ್ರತಿಭಟನೆಗೆ ಮಣಿದು ಬರಿಗೈಲಿ ವಾಪಸಾಗಿದ್ದಾರೆ.
ಬಿಡ್ಡಿಂಗ್ ನಲ್ಲಿ ಭಾಗವಹಿಸಲು ಆಸಕ್ತಿ ವಹಿಸಿ ಜಿಏಂಆರ್ ಗ್ರೂಪ್ ಹಾಗೂ ಇಂಡಸ್ ಕಂಪನಿಯ ಒಟ್ಟು ಸುಮಾರು 15 ಜನರ ತಂಡ ಪ್ರತ್ಯೇಕ ಗುಂಪುಗಳಗಿ ಅನುಕ್ರಮವಾಗಿ ಬೆಳಗ್ಗೆ ಅಂದಾಜು 10 ಹಾಗೂ 11.15 ಗಂಟೆಗೆ ವಿಮಾನ ನಿಲ್ದಾಣ ಆವರಣಕ್ಕೆ ಆಗಮಿಸಿತು. ಕೂಡಲೇ ಒಟ್ಟು ಸೇರಿದ ಸುಮಾರು 80 ಮಂದಿ ಸಿಬ್ಬಂದಿ " ಗೋ ಬ್ಯಾಕ್ ಎಂದು ಪ್ರತಿಭಟನೆ ನಡೆಸಿ ಕಂಪನಿ ಪ್ರತಿನಿಧಿಗಳನ್ನು ವಾಪಾಸು ಕಳುಹಿಸಿದರು.
ಎಂಐಎ ಸೇರಿದಂತೆ ದೇಶದ ಕೆಲವು ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಬಿಡ್ಡಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಡ್ ಸಲ್ಲಿಸಿರುವವರು ಆರಂಭಿಕ ಹಂತದಲ್ಲಿ ಆಯಾ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಸ್ವತಂತ್ರ ಮೌಲ್ಯಮಾಪನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಜಿಎಂಆರ್ ಕಂಪೆನಿಯ ಅಧಿಕಾರಿಗಳು ಎನ್ಐಐಎಫ್ ಪ್ರತಿನಿಧಿಗಳೊಂದಿಗೆ ಸೋಮವಾರ ಮೌಲ್ಯಮಾಪನಕ್ಕೆ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ನೌಕರರು ಒಟ್ಟಾಗಿ ಶಾಂತಿಯುತವಾಗಿ ಪ್ರತಿಭಟನೆ ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ತಂಡ ಮೌಲ್ಯಮಾಪನ ಪ್ರಕ್ರಿಯೆ ನಡೆಸದೇ ವಾಪಸು ತೆರಳಿತು.
ಈ ಸಂದರ್ಭ ದೈನಂದಿನ ವಿಮಾನ ಸಂಚಾರ್ಅ ಸೇವೆ ಸಹಜವಾಗಿತ್ತು. ನೌಕರರ ಸಂಘಟನೆ ಮಂಗಳೂರು ಶಾಖೆ ಅಧ್ಯಕ್ಷ ಅರವಿಂದ ಗಾಂವ್ಕರ್, ಕಾರ್ಯದರ್ಶಿ ಶ್ರವಣ್ ಕುಮಾರ್, ಕೋಶಾಧಿಕಾರಿ ಎಂ.ಎ ಶಕೀಲ್, ಸಂಘಟನಾ ಕಾರ್ಯದರ್ಶಿ ಡಿ.ಸುನಿಲ್ ಕುಮಾರ್ ಉಪಸ್ಥಿತರಿದ್ದರು.