ಬೆಂಗಳೂರು, ಜ 15 (MSP): ಆಪರೇಷನ್ ಕಮಲ ಭೀತಿಯಲ್ಲಿರುವ ಕಾಂಗ್ರೆಸ್ ಭಾರೀ ಪ್ರತಿತಂತ್ರಗಳನ್ನು ಹಣೆಯುತ್ತಿದ್ದು, ಅಸಮಾಧಾನಿತ ಶಾಸಕರನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಆದರೆ ಈ ನಡುವೆ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ವದಂತಿಗಳನ್ನು ಸಚಿವ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ.
ನಮ್ಮೆಲ್ಲಾ ಶಾಸಕರು ನನಮ್ಮೊಂದಿಗೆ ಇದ್ದಾರೆ. ಅವರ ಕ್ಷೇತ್ರಗಳ ಜನರಿಗೆ ನಾವೇ ಜವಾಬ್ದಾರರು. ಕಾಂಗ್ರೆಸ್ ಶಾಸಕರು ಕೊಳಕು ರಾಜಕೀಯ ಮಾಡುವುದಿಲ್ಲ. ಹಾಗಿದ್ರೂ ಒಂದು ವೇಳೆ ನಮ್ಮ ಶಾಸಕರನ್ನು ಬಿಜೆಪಿಯವರು ಎಲ್ಲೇ ಅಡಗಿಸಿಟ್ಟಿದ್ದರೂ ನಾವು ಕರೆತರುತ್ತೇವೆ. ಆ ಶಕ್ತಿ ನಮಗೆ ಇದೆ ಎಂದು ಹೇಳಿದ್ದಾರೆ.
ಈ ಸಂಕ್ರಾಂತಿಗೆ ರಾಜ್ಯದಲ್ಲಿ ಸಂ-ಕ್ರಾಂತಿಯಾಗಲಿದೆ ಎಂದು ಸುದ್ದಿಯಾಗಿತ್ತು. ಆದರೆ ಅದೆಲ್ಲ ಸುಳ್ಳು ,ನಮ್ಮ ಸರ್ಕಾರ ಸುಭದ್ರವಾಗಿದೆ. ಶಾಸಕರನ್ನು ತಮ್ಮ ಇಚ್ಛೆಯಂತೆ ಪ್ರಾಮಾಣಿಕವಾಗಿರಲು ಬಿಟ್ಟುಬಿಡಿ ಎಂದು ತಿಳಿಸಿದ್ದಾರೆ.