ಮಂಗಳೂರು ಅ 24 : ರಾಜಕೀಯ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಪೊಲೀಸ್ ಅಧಿಕಾರಿಯ ಹುದ್ದೆಗೇ ರಾಜಿನಾಮೆ ನೀಡಿದ್ದ ಕೂಡ್ಲಿಗಿ ಉಪ ವಿಭಾಗದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ನವೆಂಬರ್ 1ರಂದು, ರಾಜ್ಯೋತ್ಸವ ದಿನದಂದೇ ತಮ್ಮದೇ ಆದ ಹೊಸ ಪ್ರಾದೇಶಿಕ ಪಕ್ಷ ಘೋಷಿಸುವ ಮೂಲಕ ಸಕ್ರಿಯೆ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಪಕ್ಷ ಸ್ಥಾಪಿಸುವ ಸಲುವಾಗಿ ಅಂದು ನಡೆಯುವ ಸಮಾರಂಭಕ್ಕೆ ಅನುಮತಿ ಕೇಳಲು ಸ್ವತಃ ಅನುಪಮ ಶೆಣೈ ಕೂಡ್ಲಗಿ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಕಳೆದ ಜೂನ್ 4 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಇತ್ತೀಚೆಗಷ್ಟೇ ಅನುಮಪ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದರು.
ಪಕ್ಷದ ಸ್ಥಾಪನೆಯ ದಿನದಂದು ಕೂಡ್ಲಿಗಿಯಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕದಿಂದ ಪಾದಯಾತ್ರೆ ನಡೆಸಲಿದ್ದಾರೆ. ಆ ಬಳಿಕ ಅಲ್ಲಿನ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಪಕ್ಷದ ಸಮಾರಂಭ ನಡೆಯಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಉಜ್ಜೈನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರನ್ನು ಆಹ್ವಾನಿಸುವ ಸಾಧ್ಯತೆ ಇದೆ. ಅನುಪಮ ಶೆಣೈ ಅವರು ಸ್ಥಾಪಿಸಲಿರುವ ಪಕ್ಷದ ಹೆಸರು, ಚಿಹ್ನೆ, ಸ್ವರೂಪದ ರೂಪುರೇಷೆಯ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಹೊರಹಾಕಿಲ್ಲ. ಆದರೆ ಶೆಣೈ ಅವರು ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಹಣ ಕೊಡುವುದಿಲ್ಲ ತಾವೇ ಹಣ ನೀಡುವುದಿಲ್ಲ , ಸ್ವಚ್ಛ ಆಡಳಿತ ತಮ್ಮ ಪಕ್ಷ ಗುರಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.ಇನ್ನೂ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಮತ್ತು ಕನಿಷ್ಠ 60 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಶೆಣೈ ಹೇಳಿದ್ದಾರೆ