ಕುಂದಾಪುರ, ಜ 15 (MSP):ಮಸೀದಿಯೊಂದರ ಮುಂಭಾಗದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹಂದಿಯ ಕಿವಿ ಹಾಗೂ ಕಾಳುಗಳನ್ನು ಎಸೆದು ಪರಾರಿಯಾದ ಘಟನೆ ಸೋಮವಾರ ತಡರಾತ್ರಿ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಗೂರಿನಲ್ಲಿ ನಡೆದಿದೆ. ಬೈಂದೂರಿನ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ನೂರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಘಟನೆ ನಡೆದಿದ್ದು. ದುಷ್ಕೃತ್ಯ ಎಸೆಗಿದ ಆರೋಪಿಗಳನ್ನು ಸಿಸಿ ಕೆಮೆರಾದಲ್ಲಿ ಗುರುತಿಸಲಾಗಿದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ತಡರಾತ್ರಿ ಸುಮಾರು 11 ಗಂಟೆಗೆ ಬೈಕಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಬಂದಿದ್ದ ಹಂದಿಯ ಕಿವಿಗಳು ಹಾಗೂ ಕಾಲುಗಳನ್ನು ಮಸೀದಿಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಕಂಪೌಂಡ್ ಒಳಗೆ ಎಸೆದು ಹೋಗಿದ್ದರೆನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ ಮಸೀದಿಗೆ ಬಂದವರು ಇದನ್ನು ಗಮನಿಸಿದ್ದು, ಮಸೀದಿಯಲ್ಲಿ ಅಳವಡಿಸಲಾದ ಸಿಸಿಟಿವಿ ಫೂಟೇಜ್ಗಳನ್ನು ಗಮನಿಸಿದಾಗ ವಿಷಯ ಬಹಿರಂಗಗೊಂಡಿದೆ. ಕಪ್ಪು ಬಣ್ಣದ ಬೈಕಿನಲ್ಲಿ ಬಂದಿದ್ದು ಬೈಂದೂರು ವ್ಯಾಪ್ತಿಯ ಯುವಕರೆಂದು ಪೊಲಿಸರು ಗುರುತಿಸಿದ್ದಾರೆ. ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ.
ಕರಾವಳಿಯಲ್ಲಿ ಇತ್ತೀಚೆಗೆ ಕೋಮ ಭಾವನೆಯನ್ನು ಕೆರಳಿಸುವ ಕೃತ್ಯಗಳು ಕಡಿಮೆಯಾಗಿದ್ದು ಪೊಳಿಸರು ನಿಟ್ಟುಸಿರು ಬಿಟ್ಟಿದ್ದರು. ಆದರೆ ನಾಗೂರಿನಲ್ಲಿ ಸೋಮವಾರ ತಡ ರಾತ್ರಿ ನಡೆದ ಘಟನೆಯು ಪೊಲೀಸ್ ಇಲಾಖೆಯ ನಿದ್ದೆಗೆಡಿಸುವಂತೆ ಮಾಡಿದೆ. ಕೆಲವು ತಿಂಗಳ ಹಿಂದೆ ಬೈಂದೂರು ಎಸೈ ತಿಮ್ಮೆಶ್ ವರ್ಗಾವಣೆಗೆ ಬಿಜೆಪಿ ಪ್ರಮುಖರಿಂದ ಪ್ರತಿಭಟನೆ ನಡೆದಿತ್ತು. ಇದೀಗ ಮಸೀದಿಯಲ್ಲಿ ಹಂದಿಯ ಕಿವಿ ಕಾಳುಗಳು ಬಿದ್ದಿರುವುದು ಮತ್ತಷ್ಟು ಕೋಮು ಉದ್ರೇಕಕ್ಕೆ ಕಾರಣವಾಗುವ ಮುನ್ನ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.