ಮಂಗಳೂರು, ಜ 15(SM): ತೊಕ್ಕೊಟ್ಟು ಮತ್ತು ಪಂಪ್ವೆಲ್ ಫ್ಲೈಓವರ್ ಕಾಮಗಾರಿಯನ್ನು ಫೆಬ್ರವರಿ ಕೊನೆಯ ವಾರದಲ್ಲಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ ಎಂದು ಸಂಸದ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಾಮಗಾರಿಯನ್ನು ಅಷ್ಟರೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸಚಿವರು ಈಗಾಗಲೇ ಗುತ್ತಿಗೆಯನ್ನು ವಹಿಸಿರುವ ನವಯುಗ ಕಂಪೆನಿಗೆ ಸೂಚನೆ ನೀಡಿದ್ದು ೨೦ ದಿನಗಳೊಳಗೆ ತ್ವರಿತ ಗತಿಯ ಕಾಮಗಾರಿ ನಡೆಯಲಿದೆ ಎಂದರು.
ಇನ್ನುಳಿದಂತೆ ಮೂಲ್ಕಿಯಿಂದ ಕಟೀಲು, ಪೊಳಲಿ, ಬಿ.ಸಿ.ರೋಡು, ಮೆಲ್ಕಾರ್ನಿಂದ ತೊಕ್ಕೊಟ್ಟುವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ಎಲ್ಲಾ ಯೋಜನೆ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಇನ್ನು ದ.ಕ. ಜಿಲ್ಲೆಯಲ್ಲಿ ಸೋತವರ ಸಮಾವೇಶ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮನೆಯಲ್ಲಿ ಕೂತು ದೇಹ ಕೊಬ್ಬಿ ಹೋಗಿದೆ. ಈ ಹಿನ್ನೆಲೆಯಲ್ಲಿ ಕೊಬ್ಬು ಇಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರು. ಅಡ್ಡದಹೊಳೆ-ಬಿಸಿರೋಡು ಚತುಷ್ಪಥ ಕಾಮಗಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ಚತುಷ್ಪಥ ಕಾಮಗಾರಿ ಸ್ಥಗಿತಕ್ಕೆ ಕಾರಣ ಇದೆ. ಆರ್ಥಿಕ ಕಾರಣಗಳಿಂದ ಚತುಷ್ಪಥ ಕಾಮಗಾರಿ ಸ್ಥಗಿತಗೊಂಡಿದೆ. ಗುಂಡ್ಯ, ಕಲ್ಲಡ್ಕದಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿಲ್ಲ. ಮುಂದಿನ 15 ದಿನಗಳಲ್ಲಿ ಎಲ್ & ಟಿ ಕಂಪೆನಿ ಕಾಮಗಾರಿ ಆರಂಭಿಸುತ್ತದೆ ಎಂದರು.
ಲೋಕಸಭೆ ಸದಸ್ಯನಾಗಿ ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ರಾಜ್ಯ ಸರಕಾರಕ್ಕೂ ಅಷ್ಟೇ ಪಾತ್ರವಿದೆ ಅದನ್ನು ನಿಭಾಯಿಸಲಿ ಎಂದರು.