ಬಂಟ್ವಾಳ, ಜ 15(SM): ತೀವ್ರಗಾಮಿಗಳಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡುತ್ತಿದೆ. ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಇದರ ಬ್ರಾಂಡ್ಗಳು. ಕಲ್ಲು ಒಡೆಯುವ, ಬೆಂಕಿ ಹಚ್ಚುವ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಬೇಕಾಗಿಲ್ಲ ಎಂದು ಎಐಸಿಸಿಯ ಸದಸ್ಯ ಅಮೃತ್ ಶೆಣೈ ಹೇಳಿದ್ದಾರೆ.
ಹಾಸನ- ಗುಂಡ್ಯ- ಬಿ.ಸಿ.ರೋಡ್ ಅಪೂರ್ಣ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಕಾಲ್ನಡಿಗೆ ಜಾಥಾ ಮಂಗಳವಾರ ಸಂಜೆ ಮಾಣಿ ಜಂಕ್ಷನ್ಗೆ ತಳುಪಿದ ಸಂದರ್ಭ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮೋದಿ ಎರಡನೇ ಬಾರಿ ಪ್ರಧಾನಿಯಾಗುವ ಸಾಧ್ಯತೆಯೇ ಇಲ್ಲ. ಈ ಬಾರಿ ಬಿಜೆಪಿ ಸರಕಾರವನ್ನು ಜನರು ಮನೆಗೆ ಕಳುಹಿಸುತ್ತಾರೆ. ದೇಶವನ್ನು ಆಳುವ ಅರ್ಹತೆ ಕಾಂಗ್ರೆಸ್ಗೆ ಮಾತ್ರ ಇದೆ ಎಂದು ಅವರು ಹೇಳಿದರು.
ನಾವೆಲ್ಲರೂ ಹಿಂದು-ಒಂದು ಹೇಳುವವರು ಮೊದಲು ಒಟ್ಟಿಗೆ ಕುಳಿತು ಊಟ ಮಾಡಲಿ. ಕಾಂಗ್ರೆಸ್ನದ್ದು ಒಂದೇ ನಿಲುವು. ಬಿಜೆಪಿಯದ್ದು ದ್ವಂದ ನಿಲುವು. ಆಯ ರಾಜ್ಯಗಳಲ್ಲಿ ಒಂದೊಂದು ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದ ಅವರು, ನಮಗೆ ಇಷ್ಟವಾದ ಆಹಾರ ಸೇವಿಸುವುದು ನಮ್ಮ ಹಕ್ಕು. ಇದನ್ನು ಸಂವಿಧಾನವೇ ಎತ್ತಿ ಹಿಡಿದಿದೆ ಎಂದರು.
ಬಿಜೆಪಿ ದೇಶದ ಸಂಪತ್ತು ಮತ್ತು ಸೌಹಾರ್ದವನ್ನು ನಾಶ ಮಾಡಿದೆ. ಇಡೀ ಬ್ಯಾಂಕ್ ವ್ಯವಸ್ಥೆಯೇ ನಷ್ಟದಲ್ಲಿದ್ದು, ಸುಮಾರು 27 ಮಂದಿ ಬ್ಯಾಂಕ್ ಲೂಟಿ ಮಾಡಿ ವಿದೇಶಕ್ಕೆ ಓಡಿಹೋಗಿದ್ದು, ಕೇಂದ್ರ ಸರಕಾರ ಇದರ ಪಾಲುದಾರ ಎಂದ ಅವರು, ಆಡಂಬರದ ಜೀವನವನ್ನು ಅನುಭವಿಸುತ್ತಿರುವ ನರೇಂದ್ರ ಮೋದಿ ಆಧುನಿಕ ಭಾರತದ ಹಿಟ್ಲರ್ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಇಂದು ಅವ್ಯವಸ್ಥೆಯಿಂದ ಕೂಡಿ ಮೃತ್ಯು ಕೂಪವಾಗಿ ಮಾರ್ಪಾಡಾಗಿದೆ. ಅದಿರು ಲಾರಿಯ ಅಡಿಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಭಯದಿಂದಲೇ ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ ಎಂದು ಹೇಳಿದರು.
ಕಾಮಗಾರಿ ನಿಲ್ಲಲು ಮುಖ್ಯಕಾರಣ ಕೇಂದ್ರ ಸರಕಾರ ನೀಡಬೇಕಾದ ಅನುದಾನ ಗುತ್ತಿಗೆ ಕಂಪೆನಿಗೆ ನೀಡಿಲ್ಲ ಎಂದ ಅವರು ಮಳೆಗಾಲಕ್ಕೆ ಮುನ್ನ ಈ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪ್ರಾಣಹಾನಿ ಖಂಡಿತ ಎಂದರು.