ಮೂಡುಬಿದಿರೆ,ಜ 16(MSP): ಮೂಡುಕೊಣಾಜೆ ಪರಿಸರದ ಮೂರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಬಗ್ಗೆ ಹಠವಿಡಿದು, ಹೆತ್ತವರ ಮನವೊಲಿಸಿ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದದ ಕುದ್ರೈಲ್ ನಿವಾಸಿ ಕೂಲಿ ಕಾರ್ಮಿಕ ಶೀನ -ಲೀಲಾ ದಂಪತಿಯ ಇಬ್ಬರು ಮಕ್ಕಳ ಪೈಕಿ ಕಿರಿಯವಳಾದ ಕಾವ್ಯ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ಶಾಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರು ಹೇಳಿದ ಸ್ವಚ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯ ತನ್ನ ಮನೆಯಲ್ಲಿ ಶೌಚಾಲಯವಿಲ್ಲ ಎನ್ನುವ ಕೊರಗಿನಿಂದ ಹೆತ್ತವರನ್ನು ಕಾಡಲಾರಂಭಿಸಿದ್ದಾಳೆ. ಪುಟ್ಟ ಮಗಳ ಮನವಿಯನ್ನು ನಿರಾಕರಿಸಲಾಗದೇ ಶೌಚಾಲಯ ಕಟ್ಟಿಕೊಳ್ಳಲು ಮುಂದಾದವರಿಗೆ ಹಲವು ಸಂಕಷ್ಟಗಳೆದುರಾಗಿವೆ.
ಕೆಲವೇ ವರ್ಷಗಳ ಹಿಂದೆ ಒಂದಿಷ್ಟು ಜಾಗದಲ್ಲಿ ಸೋಗೆ ಮಾಡಿನ ಸೂರಿದ್ದ ಮನೆ ರಿಪೇರಿ ಮಾಡಿಸಿದಾಗ ಒಂದೂವರೆ ಲಕ್ಷ ಸಾಲವಾಗಿತ್ತು. ಹಕ್ಕು ಪತ್ರ ಸಮಸ್ಯೆ ಪರಿಹಾರವಾಗಿಲ್ಲ. ಸೂರಿದ್ದರೂ ಬಯಲು ಶೌಚಾಲಯಕ್ಕೆ ಹೊಂದಿಕೊಂಡಿದ್ದ ಕುಟುಂಬದಲ್ಲಿ ಕಾವ್ಯ ಹಠಕ್ಕೆ ಸೋತು ಪಂಚಾಯಿತಿ ಅವರನ್ನು ಸಂಪರ್ಕಿಸಿದಾಗ ಪೂರಕ ಸ್ಪಂದನೆ ಇಲ್ಲ. ಕೊನೆಗೆ ಕಾವ್ಯಳ ಕಾಟ ತಾಳಲಾಗದೇ ಮನೆಮಂದಿ ಚಿನ್ನ ಅಡವಿಟ್ಟು ಸಾಲ ಕೇಳಿ ಮೂವತ್ತು ಸಾವಿರ ವೆಚ್ಚದಲ್ಲಿ ಶೌಚಾಲಯ, ಸ್ನಾನಗೃಹ ಕಟ್ಟಿಸಿದ್ದಾಗಿದೆ. ಈ ನಡುವೆ ಪಂಚಾಯಿತಿ ಅರ್ಜಿಗೆ ವರ್ಷ ತುಂಬಿದೆ. ಅಲ್ಲಿನವರ ಸಲಹೆಯಂತೆ ಲೀಲಾ ಅವರ ಅರ್ಜಿಯ ಬದಲಾಗಿ ಒಂದು ತಿಂಗಳ ಹಿಂದೆ ಪತಿ ಶೀನ ಅವರ ಹೆಸರಲ್ಲಿ ಮತ್ತೊಂದು ಅರ್ಜಿಯನ್ನೂ ಸಲ್ಲಿಸಿದ್ದಾಗಿದೆ. ವಿಪರ್ಯಾಸ ಎಂದರೆ ಶೌಚಾಲಯ ಕಟ್ಟಿದ ಜಾಗದಲ್ಲಿ ನಾಗಬೀದಿಯ ಸಮಸ್ಯೆ ಮನೆಯವರ ಗಮನಕ್ಕೆ ಬಂದಿದೆ. ಹಾಗಾಗಿ ಶೌಚಾಲಯ ಬಳಕೆಗೆ ಮೊದಲು ಪರಿಹಾರ ಕಾರ್ಯಗಳತ್ತ ಅವರು ಗಮನ ಹರಿಸಿದ್ದಾರೆ. ಜತೆಗೆ ಪಂಚಾಯತ್ನವರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.