ಮಲ್ಪೆ, ಜ 16(MSP): ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆ ಮೀನುಗಾರಿಕಾ ಸುವರ್ಣ ತ್ರಿಭುಜ ಬೋಟ್ ಹಾಗೂ ನಾಪತ್ತೆಯಾಗಿರುವ ಏಳು ಮೀನುಗಾರರು ಕಣ್ಮರೆಯಾಗಿ ೩೩ ದಿನ ಕಳೆದರೂ, ಯಾವುದೇ ಸುಳಿವಿನ ಲಭ್ಯವಾಗದ ಕಾರಣ, ಹಾಗೂ ಸರ್ಕಾರದಿಂದ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯದ ಕಾರಣ ದಿನಂಪ್ರತಿ ಕಣ್ಣೀರಲ್ಲೇ ಕೈತೊಳೆಯುತ್ತಿರುವ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.
ನಾಪತ್ತೆಯಾದ ಮೀನುಗಾರರಾದ ಕುಮಟಾ ನಿವಾಸಿಗಳಾದ ಲಕ್ಷ್ಮಣ್, ಸತೀಶ್, ಭಟ್ಕಳ ನಿವಾಸಿಗಳಾದ ಹರೀಶ್, ರಮೇಶ್, ಹೊನ್ನಾವರ ಮಂಕಿಯ ನಿವಾಸಿ ರವಿ, ಚಂದ್ರಶೇಖರ್ ಮತ್ತು ದಾಮೋದರ್ ಅವರ ಸುರಕ್ಷಿತರಾಗಿ ಮನೆಗೆ ಹಿಂತಿರುಗುವಂತೆ, ನಾಪತ್ತೆಯಾದ 7 ಜನರ ಮನೆಮಂದಿ ಜ.16 ರ ಮಂಗಳವಾರ ಉಡುಪಿಯ ಪ್ರಸಿದ್ಧ ದೇವಸ್ಥಾನ ಅನಂತೇಶ್ವರ ದೇವಾಲಯದಲ್ಲಿ ಪವನ ಹೋಮ ಮಾಡಿ ಪ್ರಾರ್ಥಿಸಿದ್ದಾರೆ.
ಮೀನುಗಾರರು ಎಲ್ಲೇ ಇದ್ದರೂ ಸುರಕ್ಷಿತವಾಗಿರಲಿ, ಜೀವಂತವಾಗಿ ಹಿಂತಿರುಗಿ ಬರಲಿ ಎಂದು ಮನೆಮಂದಿಯೊಂದಿಗೆ ಮೀನುಗಾರ ಸಂಘಟನೆಗಳು ಸೇರಿಕೊಂಡು ಪ್ರಾರ್ಥಿಸಿದ್ದಾರೆ.